ಸಿಆರ್‌ಝೆಡ್ ಮರಳುಗಾರಿಕೆ ಪರಾವನಿಗೆಯಲ್ಲಿ ರಾಜಕಾರಣ
ಉಡುಪಿ, ಆ.23: ಸಿಆರ್‌ಝೆಡ್ ವ್ಯಾಪ್ತಿಯ ಮರಳುಗಾರಿಕೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ಮಾಡುತ್ತಿದ್ದ 170 ಮಂದಿ ಯಲ್ಲಿ ಸುಮಾರು 45 ಜನರ ಮೇಲೆ ಜಿಲ್ಲಾಡಳಿತವು ಹೈಕೋರ್ಟ್‌ನಲ್ಲಿ ಕೇವಿಯಟ್ ಹಾಕಿದ್ದು, ಇದರ ಹಿಂದೆ ಕಾಂಗ್ರೆಸಿಗರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಕೈವಾಡ ಸ್ಪಷ್ಟವಾಗಿ ಕಾಣುತ್ತಿದೆ ಮತ್ತು ಈ 45 ಮಂದಿಯನ್ನು ರಾಜಕೀಯ ಕಾರಣಕ್ಕೆ ಹೊರಗಿಡುವ ಹುನ್ನಾರ ನಡೆಯುತ್ತಿದೆ ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೆನೈ ಹಸಿರು ಪೀಠದಲ್ಲಿ ಸಿಆರ್‌ಝೆಡ್ ಮರಳುಗಾರಿಕೆ ಸಂಬಂಧಿಸಿದ ತಡೆಯಾಜ್ಞೆ ತೆರವುಗೊಂಡಿದ್ದು, ಈ ಮರಳುಗಾರಿಕೆಗೆ ಪರಿಸರ ಇಲಾಖೆ ನಿರಾಪೇಕ್ಷಣಾ ಪತ್ರ ನೀಡಿದೆ. ಆ.7ರಿಂದ ಮರಳು ತೆಗೆಯುವ ಬಗ್ಗೆ ಪರವಾನಿಗೆ ನೀಡುವ ಅವಕಾಶ ಇದ್ದರೂ ಜಿಲ್ಲಾಡಳಿತ ಮಾತ್ರ ವಿಳಂಬ ನೀತಿ ಅನುಸರಿಸುತ್ತಿದೆ. ಇವರಿಗೆ ಮರಳು ಸಮಸ್ಯೆ ಪರಿಹರಿಸುವ ಯಾವುದೇ ಇರಾದೆ ಇಲ್ಲವಾಗಿದೆ ಎಂದು ದೂರಿದರು.
ಈಗ 170 ಮಂದಿಯಲ್ಲಿ 45 ಮಂದಿಯನ್ನ ರಾಜಕೀಯ ಕಾರಣಕ್ಕಾಗಿ ಕೈ ಬಿಡಲಾಗುತ್ತಿದೆ. ಉಸ್ತುವಾರಿ ಸಚಿವರು ವ್ಯವಹಾರದಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಈ ರಾಜಕಾರಣಕ್ಕೆ ಜಿಲ್ಲಾಧಿಕಾರಿಗಳು ಬಲಿಯಾಗುತ್ತಿದ್ದಾರೆ ಎಂದು ಆರೋಪಿಸಿದ ಅವರು, ಇದರಲ್ಲಿ ಸಚಿವರು ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದರ ಹಿಂದೆ ಎಂ ಸ್ಯಾಂಡ್ ಲಾಬಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಈ ಹಿಂದೆ ಮರಳುಗಾರಿಕೆ ಮಾಡುತ್ತಿದ್ದ 170 ಮಂದಿಗೂ ತಕ್ಷಣ ಮರಳು ಗಾರಿಕೆ ನಡೆಸಲು ಪರವಾನಿಗೆ ನೀಡಬೇಕು. ಆ.28ರೊಳಗೆ ಈ ಸಮಸ್ಯೆ ಪರಿಹರಿಸಿ ಮರಳುಗಾರಿಕೆ ಆರಂಭಿಸಿದಿದ್ದರೆ ಬಿಜೆಪಿ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು. ಈ ಬಗ್ಗೆ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಗಡುವು ನೀಡಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಯಶ್‌ಪಾಲ್ ಸುವರ್ಣ, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಪ್ರಭಾಕರ ಪೂಜಾರಿ, ಉಪೇಂದ್ರ ನಾಯಕ್ ಉಪಸ್ಥಿತರಿದ್ದರು.