ರೈಲಿನಿಂದ ಕೆಳಗೆ ಬಿದ್ದ ಪ್ರಯಾಣಿಕನನ್ನು ಇನ್ನೊಂದು ರೈಲಿನೊಳಗೆ ಎಸೆದರು
ಮುಂಬೈ, ಆ.23: ಗೃಹರಕ್ಷಕ ದಳದ ಸಿಬ್ಬಂದಿ ಹಾಗೂ ರೈಲ್ವೆ ಪೊಲೀಸ್ ಕಾನ್‌ಸ್ಟೇಬಲ್ ಚಲಿಸುತ್ತಿರುವ ರೈಲೊಂದರಿಂದ ಕೆಳಗೆ ಬಿದ್ದು ಗಾಯಗೊಂಡ ಪ್ರಯಾಣಿಕನಿಗೆ ಯಾವುದೇ ಪ್ರಥಮ ಚಿಕಿತ್ಸೆ ನೀಡದೆ, ಆಸ್ಪತ್ರೆಗೆ ದಾಖಲಿಸದೆ ಇನ್ನೊಂದು ರೈಲಿನಲ್ಲಿ ಎಸೆದು ಹೋದ ಪರಿಣಾಮ ಪ್ರಯಾಣಿಕ ಮೃತಪಟ್ಟ ಘಟನೆ ಮುಂಬೈಯಲ್ಲಿ ಬೆಳಕಿಗೆ ಬಂದಿದೆ.
ಈ ಘಟನೆ ಸಿಸಿಟಿವಿ ದೃಶ್ಯಗಳಿಂದಾಗಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಗೃಹ ರಕ್ಷಕ ದಳದ ಸಿಬ್ಬಂದಿ ಹಾಗೂ ರೈಲ್ವೆ ಪೊಲೀಸ್ ಕಾನ್‌ಸ್ಟೆಬಲ್‌ರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಜುಲೈ 22 ಹಾಗೂ 23ರ ನಡುವೆ ರಾತ್ರಿ 12.59ಕ್ಕೆ ಮುಂಬೈಯ ಸನ್ಪಾಡ ರೈಲ್ವೆ ನಿಲ್ದಾಣದಲ್ಲಿ ಪನ್ವೇಲ್‌ನತ್ತ ಸಂಚರಿಸುತ್ತಿದ್ದ ರೈಲಿನಿಂದ ಅಪರಿಚಿತ ವ್ಯಕ್ತಿಯೋರ್ವ ಕೆಳಗೆ ಬಿದ್ದಿದ್ದ. ಗಂಭೀರ ಗಾಯಗೊಂಡಿದ್ದ ಆತನನ್ನು ಗೃಹ ರಕ್ಷಕ ದಳದ ಸಿಬ್ಬಂದಿ ಹಾಗೂ ರೈಲ್ವೆ ಪೊಲೀಸ ಕಾನ್‌ಸ್ಟೇಬಲ್ 1:55ಕ್ಕೆ ಆಗಮಿಸಿದ ಇನ್ನೊಂದು ರೈಲಿನ ಒಳಗಡೆ ಎಸೆದಿದ್ದಾರೆ. ಪನ್ವೇಲ್‌ನಲ್ಲಿ ಈ ರೈಲಿನ ನಿರ್ವಹಣೆಗಾಗಿ ದಿಕ್ಕು ಬದಲಾಯಿಸಲಾಗಿತ್ತು. ಮರುದಿನ ಮಧ್ಯಾಹ್ನ ಸ್ವಚ್ಛತಾ ಸಿಬ್ಬಂದಿ ಗಾಯಗೊಂಡ ಪ್ರಯಾಣಿಕನ್ನು ಗುರುತಿಸಿದ್ದರು.
ಗಾಯಗೊಂಡ ಪ್ರಯಾಣಿಕನನ್ನು ಪನ್ವೇಲ್ ಗ್ರಾಮೀಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಅದಾಗಲೇ ಅವರು ಮೃತಪಟ್ಟಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಗೃಹ ರಕ್ಷಕ ದಳದ ಸಿಬ್ಬಂದಿ ಹಾಗೂ ರೈಲ್ವೆ ಪೊಲೀಸ್ ಕಾನ್‌ಸ್ಟೇಬಲ್‌ರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಆದರೆ, ಕೇಂದ್ರೀಯ ರೈಲ್ವೆ ಅವರ ಹೆಸರನ್ನು ಬಹಿರಂಗಗೊಳಿಸಿಲ್ಲ.
ಚಲನೆಯಿಲ್ಲದ ಪ್ರಯಾಣಿಕನ ಸಮೀಪ ಜಿಆರ್‌ಪಿ ಕಾನ್‌ಸ್ಟೇಬಲ್ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ 15 ನಿಮಿಷಗಳ ಕಾಲ ನಿಂತಿದ್ದು, ಮುಂದಿನ ರೈಲು ಆಗಮಿಸಿದಾಗ ಅವರನ್ನು ಪ್ರಥಮ ದರ್ಜೆ ಬೋಗಿಯಲ್ಲಿ ಎಸೆದು ತೆರಳಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಮುಂಬೈ ಉಪವಲಯದ ವಿಭಾಗದಲ್ಲಿ ಪ್ರತಿದಿನ ಸರಾಸರಿ 10 ಜನ ಸಾವನ್ನಪ್ಪುತ್ತಿದ್ದಾರೆ. ಅಷ್ಟೇ ಸಂಖ್ಯೆಯಲ್ಲಿ ಗಾಯಗೊಳ್ಳುತ್ತಿದ್ದಾರೆ.