×
Ad

ಸೆವೆಂತ್ ಫ್ಲೀಟ್ ಕಮಾಂಡರ್ ವಜಾ: ಅಪಘಾತದಲ್ಲಿ ನಾಪತ್ತೆಯಾದ 10 ಸೈನಿಕರಿಗಾಗಿ ಶೋಧ

Update: 2017-08-23 23:24 IST

ವಾಶಿಂಗ್ಟನ್, ಆ. 23: ಏಶ್ಯಾದಲ್ಲಿ ಅಮೆರಿಕದ ಯುದ್ಧನೌಕೆಗಳ ಸರಣಿ ಅಪಘಾತಗಳ ಹಿನ್ನೆಲೆಯಲ್ಲಿ ಅಮೆರಿಕ ನೌಕಾಪಡೆ ಬುಧವಾರ ತನ್ನ ಸೆವೆಂತ್ ಫ್ಲೀಟ್ ಕಮಾಂಡರ್ ವೈಸ್ ಅಡ್ಮಿರಲ್ ಜೋಸೆಫ್ ಆಕಾಯ್ನಿರನ್ನು ವಜಾಗೊಳಿಸಿದೆ.

ಈ ನಡುವೆ, ಇತ್ತೀಚಿನ ಅಪಘಾತದ ಬಳಿಕ ನಾಪತ್ತೆಯಾದ ನೌಕಾಪಡೆಯ 10 ಸೈನಿಕರಿಗಾಗಿ ನಡೆಸಲಾಗುತ್ತಿರುವ ಶೋಧ ಮುಂದುವರಿದಿದೆ. ಸಿಂಗಾಪುರ ಸಮುದ್ರದಲ್ಲಿ ಸೋಮವಾರ ಮುಂಜಾನೆ ಅಮೆರಿಕದ ಯುದ್ಧನೌಕೆ ಯುಎಸ್‌ಎಸ್ ಜಾನ್ ಎಸ್. ಮೆಕೇನ್ ಮತ್ತು ವಾಣಿಜ್ಯ ಹಡಗೊಂದರ ನಡುವೆ ಢಿಕ್ಕಿ ಸಂಭವಿಸಿತ್ತು. ಇದು ಈ ವರ್ಷ ಅಮೆರಿಕ ಪೆಸಿಫಿಕ್ ಫ್ಲೀಟ್‌ನಲ್ಲಿ ನಡೆದ ನಾಲ್ಕನೆ ಪ್ರಮುಖ ಘಟನೆಯಾಗಿದೆ.

‘‘ಸೆವೆಂತ್ ಫ್ಲೀಟ್ ಕಮಾಂಡರ್ ವೈಸ್ ಅಡ್ಮಿರಲ್ ಜೋಸೆಫ್ ಆಕಾಯ್ನಿರ ಸಾಮರ್ಥ್ಯದಲ್ಲಿ ವಿಶ್ವಾಸ ಕಳೆದುಹೋಗಿರುವ ಹಿನ್ನೆಲೆಯಲ್ಲಿ ಅವರನ್ನು ಯುಎಸ್ ಪೆಸಿಫಿಕ್ ಫ್ಲೀಟ್‌ನ ಕಮಾಂಡರ್ ಅಡ್ಮಿರಲ್ ಸ್ಕಾಟ್ ಸ್ವಿಫ್ಟ್ ಇಂದು ಸೇವೆಯಿಂದ ಮುಕ್ತಗೊಳಿಸಿದ್ದಾರೆ’’ ಎಮದು ಅಮೆರಿಕ ನೌಕಾಪಡೆಯು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಆಕಾಯ್ನರನ್ನು ಕರ್ತವ್ಯದಿಂದ ಮುಕ್ತಗೊಳಿಸುವುದಕ್ಕಾಗಿ ಸ್ವಿಫ್ಟ್ ಜಪಾನ್‌ಗೆ ಹೋಗಿದ್ದು, ಸೆವೆಂತ್ ಫ್ಲೀಟ್‌ನ ಉಸ್ತುವಾರಿಯನ್ನು ತಕ್ಷಣ ವಹಿಸಿಕೊಳ್ಳುವಂತೆ ಉಪ ಪೆಸಿಫಿಕ್ ಫ್ಲೀಟ್ ಕಮಾಂಡರ್ ರಿಯರ್ ಅಡ್ಮಿರಲ್ ಫಿಲ್ ಸಾಯರ್‌ಗೆ ಸೂಚಿಸಿದ್ದಾರೆ.

ಸೈಬರ್ ದಾಳಿ ಕಾರಣವೇ?

ಏಶ್ಯದಲ್ಲಿ ಅಮೆರಿಕದ ಯುದ್ಧ ನೌಕೆಗಳು ಪದೇ ಪದೇ ಅಪಘಾತಕ್ಕೆ ಈಡಾಗಲು ಸೈಬರ್ ದಾಳಿಗಳು ಕಾರಣವಾಗಿರಬಹುದೇ ಎಂಬುದನ್ನು ಪರಿಶೀಲಿಸಲು ಅಮೆರಿಕದ ನೌಕಾಪಡೆ ಮುಂದಾಗಿದೆ.

 ಅಮೆರಿಕ ನೌಕಾಪಡೆಯ ಭದ್ರತಾ ವ್ಯವಸ್ಥೆಯನ್ನು ಪರಿಗಣಿಸಿದರೆ, ಇಂಥ ಢಿಕ್ಕಿಯನ್ನು ಹೊರಗಿನಿಂದ ರೂಪಿಸುವುದು ಸಾಧ್ಯವಿಲ್ಲ ಎಂಬುದಾಗಿ ಕೆಲವು ಪರಿಣತರು ಅಭಿಪ್ರಾಯಪಟ್ಟರೆ, ಮಾನವ ಲೋಪಗಳಿಂದಾಗಿ ಮತ್ತು ಕಾಕತಾಳೀಯವಾಗಿ ಇತ್ತೀಚಿನ ಅಪಘಾತಗಳು ಸಂಭವಿಸಿವೆ ಎಂದು ಹೇಳುವುದೂ ಸರಿಯಾದ ವಿವರಣೆಯಾಗುವುದಿಲ್ಲ ಎಂದು ಇತರರು ಹೇಳುತ್ತಾರೆ.

‘‘ಎಲ್ಲ ಸಾಧ್ಯತೆಗಳನ್ನು ನಾವು ಪರಿಶೀಲಿಸುತ್ತಿದ್ದೇವೆ’’ ಎಂದು ಅಮೆರಿಕ ನೌಕಾ ಕಾರ್ಯಾಚರಣೆಗಳ ಮುಖ್ಯಸ್ಥ ಅಡ್ಮಿರಲ್ ಜಾನ್ ರಿಚರ್ಡ್ಸನ್ ಸೋಮವಾರ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News