×
Ad

ಗಣಪತಿ ಆತ್ಮಹತ್ಯೆ ಪ್ರಕರಣ: ರಾಜ್ಯ ಸರಕಾರದ ರಾಜೀನಾಮೆಗೆ ಸಂಸದ ನಳಿನ್ ಆಗ್ರಹ

Update: 2017-08-24 17:30 IST

ಮಂಗಳೂರು, ಆ. 24: ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅವರ ಬಳಿಯಿದ್ದ ರಹಸ್ಯ ದಾಖಲೆಗಳನ್ನು ಅಳಿಸಿ ಹಾಕಿದ ಹಿನ್ನಲೆಯಲ್ಲಿ ರಾಜ್ಯ ಸರಕಾರ ರಾಜೀನಾಮೆ ನೀಡಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.

ಗುರುವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರ ಮತ್ತು ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಹೆಸರು ತಳಕು ಹಾಕಿಕೊಂಡಿದೆ. ಅವರನ್ನು ರಕ್ಷಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತ: ಮುತುವರ್ಜಿ ವಹಿಸಿ ಗಣಪತಿಗೆ ಸೇರಿದ 16 ಮತ್ತು 8 ಜಿಬಿ ಪೆನ್‌ಡ್ರೈವ್‌ನಲ್ಲಿದ್ದ ಅನೇಕ ದಾಖಲೆಗಳನ್ನು ಅಳಿಸಿ ಹಾಕಿಸಿದ್ದಾರೆ. ಹಾಗಾಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಬೇಕು ಎಂದರು.

ಅಂದು ಗೃಹಸಚಿವರಾಗಿದ್ದ ಕೆ.ಜೆ. ಜಾರ್ಜ್‌ರ ಹೆಸರನ್ನು ಗಣಪತಿ ಉಲ್ಲೇಖಿಸಿದ್ದರು. ಬಳಿಕ ಅವರ ರಾಜೀನಾಮೆ ಪಡೆಯಲಾಯಿತಾದರೂ ಕೂಡ ನಂತರ ಮುಖ್ಯಮಂತ್ರಿ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಿ ರಕ್ಷಿಸಲು ಹೊರಟಿದ್ದಾರೆ. ಅಲ್ಲದೆ ಪರಮೇಶ್ವರ್ ಬಳಿಯಿದ್ದ ಗೃಹಖಾತೆಯನ್ನು ತನ್ನ ತೆಕ್ಕೆಗೆ ಸೇರಿಸಿದ್ದಾರೆ. ಹಾಗಾಗಿ ಇದರಲ್ಲಿ ಮುಖ್ಯಮಂತ್ರಿಯ ಪಾತ್ರ ಹೆಚ್ಚಿರುವ ಸಂಶಯ ಕಾಡುತ್ತಿದೆ ಎಂದು ನಳಿನ್ ಆರೋಪಿಸಿದರು.

ಗೋರಖ್‌ಪುರ ಘಟನೆಯ ಹಿನ್ನೆಲೆಯಲ್ಲಿ ಬಿಜೆಪಿಯ ರಾಜೀನಾಮೆ ಬಯಸುವ ಕಾಂಗ್ರೆಸಿಗರು ಕೋಲಾರದಲ್ಲಿ ನಡೆದ 36 ಮಕ್ಕಳ ಸಾವಿನ ಬಗ್ಗೆ ಯಾಕೆ ಮೌನ ತಾಳಿದ್ದಾರೆ. ಈ ಘಟನೆಯ ಹೊಣೆ ಹೊತ್ತು ಕೋಲಾರದ ಉಸ್ತುವಾರಿ ಸಚಿವರು ಕೂಡ ರಾಜೀನಾಮೆ ನೀಡಲಿ ಎಂದು ನಳಿನ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮಾಜಿ ಶಾಸಕ ಮೋನಪ್ಪ ಭಂಡಾರಿ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News