ಕುಂಜತ್ತಬೈಲ: ಕಲಾವಿದನಿಗೆ ಪಟ್ಲ ಫೌಂಡೇಶನ್ ನೆರವು
ಮಂಗಳೂರು, ಆ.24: ರಸ್ತೆ ಬದಿ ಡೇರೆಯಲ್ಲಿ ನಿರ್ಗರಿಕರಂತೆ ಬದುಕುತ್ತಿದ್ದ ಕರಾವಳಿಯ ಪ್ರಸಿದ್ಧ ಯಕ್ಷಗಾನ ಮೇಳಗಳಲ್ಲಿ ಮಿಂಚಿದ್ದ ಕಲಾವಿದ ಪುರಂದರ ರಿಗೆ ಕಟೀಲು ಮೇಳದ ಭಾಗವತ ಪಟ್ಲ ಸತೀಶ್ ಶೆಟ್ಟಿ ನೆರವಿನ ಹಸ್ತ ಚಾಚಿದ್ದಾರೆ.
ಕಟೀಲು, ಸುಂಕದ ಕಟ್ಟೆ ಮೊದಲಾದ ಮೇಳಗಳಲ್ಲಿ 24 ವರ್ಷ ತಿರುಗಾಟ ನಡೆಸಿದ ಯಕ್ಷಗಾನ ಕಲಾವಿದ 58ರ ಹರೆಯದ ಪುರಂದರ ರಸ್ತೆ ಬದಿಯಲ್ಲಿ ದಿನ ದೂಡುತ್ತಿದ್ದರು. ಗೆಜ್ಜೆ ಹಾಕಿದ ಕಾಲುಗಳಲ್ಲಿ ನೋವು ಕಾಣಿಸಿಕೊಂಡ ಕಾರಣ ಗೆಜ್ಜೆ ಕಟ್ಟಲಾಗದೆ ಬೇರೆ ಉದ್ಯೋಗವೂ ಮಾಡಲಾಗದೆ ಕುಂಜತ್ತಬೈಲ್‌ನ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಟರ್ಪಾಲ್ ಡೇರೆಯಲ್ಲಿ ಬದುಕುತ್ತಿದ್ದರು. ಅವರ ಅಕ್ಕ ಶಶಿಕಲಾ ಕೂಡ ಈ ಡೇರೆಯಲ್ಲಿ ಜೀವನ ಸಾಗಿಸುತ್ತಿದ್ದರು. ಮೊದಲು ಬಾಡಿಗೆ ಮನೆಯಲ್ಲಿದ್ದ ಇವರು ಬಾಡಿಗೆ ಕಟ್ಟಲು ಸಾಧ್ಯವಾಗದೆ ಬೀದಿಗೆ ತಳ್ಳಲ್ಪಟ್ಟಿದ್ದರು. ಶಶಿಕಲಾ ಮನೆ ಮನೆಗಳಲ್ಲಿ ಮುಸುರೆ ತಿಕ್ಕಿ ತನ್ನ ಅಣ್ಣನ ತುತ್ತಿಗೆ ಆಸರೆಯಾಗಿದ್ದರು.
ವಿಚಾರ ತಿಳಿದ ಭಾಗವತ ಪಟ್ಲ ಸತೀಶ್ ಶೆಟ್ಟಿ ಈ ಬಗ್ಗೆ ತಮ್ಮ ಯಕ್ಷಧ್ರುವ ಪಟ್ಲ ಫೌಂಡೇಶನ್ ಪದಾಧಿಕಾರಿಗಳಲ್ಲಿ ಚರ್ಚಿಸಿ ಟ್ರಸ್ಟ್ ವತಿಯಿಂದ ಮನೆ ನಿರ್ಮಿಸಿ ಕೊಡಲು ಮುಂದಾಗಿದ್ದಾರೆ. ಅದರಂತೆ ಕುಂಜತ್ತ ಬೈಲಿನಲ್ಲಿರುವ ಪುರಂದರ ಅವರ ಡೇರೆ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ಪಟ್ಲ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸುದೇಶ್ ಕುಮಾರ್, ರವಿ ಶೆಟ್ಟಿ ಅಶೋಕ ನಗರ ಉಪಸ್ಥಿತರಿದ್ದರು.