ಆ. 26ರಂದು ಶ್ರೀಲಂಕಾ ಪ್ರಧಾನಿ ಕೊಲ್ಲೂರಿಗೆ ಭೇಟಿ
ಉಡುಪಿ, ಆ. 24: ಶ್ರೀಲಂಕಾದ ಪ್ರಧಾನಿ ರನಿಲಾ ವಿಕ್ರಮಶಿಂಘೆ ಅವರು ಆ.25ರಿಂದ 27ರವರೆಗೆ ಭಾರತದ ಪ್ರವಾಸದಲ್ಲಿದ್ದು, ಈ ಸಂದರ್ಭದಲ್ಲಿ ಆ.26ರ ಶನಿವಾರ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ವಿಶೇಷ ದರ್ಶನಕ್ಕೆ ಕೊಲ್ಲೂರಿಗೂ ಆಗಮಿಸುವ ಕಾರ್ಯಕ್ರಮವಿದೆ.
ಆ.26ರ ಶನಿವಾರ ಬೆಳಗ್ಗೆ 9 ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ (ಟಿಬಿಸಿ) ಹೊರಟು ಕುಂದಾಪುರ ತಾಲೂಕಿನ ಅರೆಶಿರೂರಿಗೆ ಆಗಮಿಸುವ ಪ್ರಧಾನಿಗಳು 11 ಕ್ಕೆ ಮೂಕಾಂಬಿಕಾ ದೇವಾಲಯದ ಅತಿಥಿಗೃಹಕ್ಕೆ ಆಗಮಿಸಲಿದ್ದಾರೆ. 11:15 ರಿಂದ ಅಪರಾಹ್ನ 1 ಗಂಟೆಯವರೆಗೆ ಮೂಕಾಂಬಿಕಾ ದೇವಾಲಯದಲ್ಲಿ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುವ ಪ್ರಧಾನಿ, 1:30ಕ್ಕೆ ಕೊಲ್ಲೂರಿನಿಂದ ಅರೆಶಿರೂರಿಗೆ ಬಂದು ಅಲ್ಲಿಂದ ವಿಮಾನದಲ್ಲಿ 3:20ಕ್ಕೆ ಬೆಂಗಳೂರು ತಲುಪಲಿದ್ದಾರೆ.
ಶ್ರೀಲಂಕಾ ಪ್ರಧಾನಿ ಅವರೊಂದಿಗೆ ಪತ್ನಿ ಪ್ರೊ.ಮೈತ್ರೀ ವಿಕ್ರಮಶಿಂಘೆ, ಶ್ರೀಲಂಕಾದ ಡೆಪ್ಯುಟಿ ಹೈಕಮಿಷನರ್ ವಿ. ಕೃಷ್ಣಮೂರ್ತಿ ಸೇರಿದಂತೆ ವಿಶೇಷ ಅಧಿಕಾರಿಗಳ ತಂಡ ಆಗಮಿಸಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.