ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿರುವ ಕ್ಷಯರೋಗಕ್ಕೆ ಅಪೌಷ್ಟಿಕತೆ,ಕುಡಿತ ಕಾರಣ
ಬಾಸ್ಟನ್(ಅಮೆರಿಕ),ಆ.24: ದಕ್ಷಿಣ ಭಾರತದ ರಾಜ್ಯಗಳಲ್ಲಿ ವ್ಯಾಪಕವಾಗಿರುವ ಕ್ಷಯರೋಗಕ್ಕೆ ಅಪೌಷ್ಟಿಕತೆ ಮತ್ತು ಮದ್ಯಸೇವನೆ ಪ್ರಮುಖ ಕಾರಣಗಳಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಬಾಸ್ಟನ್ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್(ಬಿಯುಎಸ್‌ಎಂ) ಮತ್ತು ತಮಿಳುನಾಡಿನ ಜವಾಹರಲಾಲ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಸಂಶೋಧಕರು ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ಈ ಅಂಶವು ಬೆಳಕಿಗೆ ಬಂದಿದೆ.
ಜರ್ನಲ್ ಪ್ಲಾಸ್ ಒನ್‌ನಲ್ಲಿ ಪ್ರಕಟಗೊಂಡಿರುವ ಅಧ್ಯಯನವು ಪುದುಚೇರಿ ಮತ್ತು ತಮಿಳುನಾಡುಗಳಲ್ಲಿ ಇತ್ತೀಚಿಗೆ ಕ್ಷಯರೋಗದಿಂದ ಪೀಡಿತರಾಗಿರುವವರನ್ನು ತನ್ನ ಸಮೀಕ್ಷೆಯಲ್ಲಿ ಒಳಗೊಂಡಿತ್ತು ಮತ್ತು ಅಧ್ಯಯನದಿಂದ ಲಭ್ಯ ದತ್ತಾಂಶಗಳನ್ನು ಪ್ರದೇಶದಲ್ಲಿಯ ಜನಸಂಖ್ಯೆ ಮಟ್ಟದ ದತ್ತಾಂಶಗಳೊಂದಿಗೆ ಹೋಲಿಸಲಾಗಿತ್ತು.
ಮಹಿಳೆಯರಲ್ಲಿ ಶೇ.61ಕ್ಕೂ ಅಧಿಕ ಕ್ಷಯ ಪ್ರಕರಣಗಳಿಗೆ ಅಪೌಷ್ಟಿಕತೆ ಕಾರಣ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಮದ್ಯಪಾನದ ದುಷ್ಪರಿಣಾಮಗಳನ್ನು ತಗ್ಗಿಸುವುದು ಸಾಧ್ಯವಾದರೆ ಪುರುಷರಲ್ಲಿಯ ಶೇ.75 ಪ್ರಕರಣಗಳನ್ನು ನಿವಾರಿಸಬಹುದು ಎನ್ನುವುದನ್ನೂ ಅಧ್ಯಯನವು ಬೆಳಕಿಗೆ ತಂದಿದೆ.
ವಿಶ್ವದಲ್ಲಿ ವಾರ್ಷಿಕ ಅಂದಾಜು 10.6 ಮಿ.ಕ್ಷಯರೋಗ ಪ್ರಕರಣಗಳು ವರದಿಯಾಗು ತ್ತಿದ್ದು, ಇದರಲ್ಲಿ ಭಾರತದ ಪಾಲು ಶೇ.27ರಷ್ಟಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಕ್ಷಯರೋಗಿಗಳಿಗೆ ಪೌಷ್ಟಿಕಾಂಶ ಕಾಳಜಿಯ ಬಗ್ಗೆ ಭಾರತ ಸರಕಾರವು ಇತ್ತೀಚಿಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ನಾವು ಬೆಳಕಿಗೆ ತಂದಿರುವ ಅಂಶಗಳು ಅವರ ಪ್ರಯತ್ನಗಳಿಗೆ ಹೆಚ್ಚಿನ ಬಲ ಮತ್ತು ಕ್ಷಯರೋಗವನ್ನು ತಡೆಯಲು ಅಪೌಷ್ಟಿಕತೆಯ ನಿವಾರಣೆಗೆ ಹೆಚ್ಚಿನ ಒತ್ತು ನೀಡುತ್ತವೆ ಎಂದು ನಾವು ನಿರೀಕ್ಷಿಸಿದ್ದೇವೆ ಎಂದು ಬಿಯುಎಸ್‌ಎಂನ ಸಹಾಯಕ ಪ್ರೊಫೆಸರ್ ನತಾಶಾ ಹಾಚ್‌ಬರ್ಗ್ ಹೇಳಿದ್ದಾರೆ.