×
Ad

ಬಾಲಕಾರ್ಮಿಕರನ್ನು ನೇಮಿಸಿದರೆ ಕಠಿಣ ಶಿಕ್ಷೆ: ಜಿಲ್ಲಾಧಿಕಾರಿ

Update: 2017-08-24 21:08 IST

ಮಂಗಳೂರು, ಆ. 24: ಬಾಲಕಾರ್ಮಿಕ ಪದ್ಧತಿಯು ಒಂದು ಸಾಮಾಜಿಕ ಪಿಡುಗಾಗಿದ್ದು, ಈ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸರ್ವರ ಸಹಕಾರ ಅತ್ಯಗತ್ಯವಾಗಿದೆ.

ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ ಕಾಯ್ದೆ -1986ನ್ನು ಜಾರಿಗೆ ತಂದಿದ್ದರೂ ಕೂಡ ಇನ್ನೂ ಕೂಡ ಬೆರಳೆಣಿಕೆಯಷ್ಟು ಪ್ರಕರಣಗಳು ವರದಿಯಾಗುತ್ತಿದೆ. ಕೇಂದ್ರ ಸರಕಾರವು ಈ ಕಾಯ್ದೆಗೆ 2016ರಲ್ಲಿ ತಿದ್ದುಪಡಿ ಮಾಡಿದೆ. ಅದರಂತೆ 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ಹಾಗೂ 14ರಿಂದ 18 ವರ್ಷದೊಳಗಿನ ಕಿಶೋರಾವಸ್ಥೆಯ ಮಕ್ಕಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಸಿಕೊಳ್ಳುವಂತಿಲ್ಲ.

ಈ ಕಾಯಿದೆಯಲ್ಲಿರುವ ತೀವ್ರ ಮತ್ತು ಕಠಿಣ ಸ್ವರೂಪವಾದ ದಂಡನೆ ಇದ್ದರೂ ಸಹ ಇದರ ಅರಿವು ಕೆಲವರಿಗೆ ತಿಳಿಯದ ಹಿನ್ನೆಲೆಯಲ್ಲಿ ಈ ರೀತಿ ಮರುಕಳಿಸುತ್ತಿದೆ. ಈ ಕಾಯಿದೆಯಂತೆ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡು ಪ್ರಕರಣಗಳು ಸಾಬೀತಾದಲ್ಲಿ 6 ತಿಂಗಳಿಗೆ ಕಡಿಮೆ ಇಲ್ಲದ ಹಾಗೂ 2 ವರ್ಷದವರೆಗೆ ವಿಸ್ತರಿಸಬಹುದಾದ ಕಠಿಣ ಶಿಕ್ಷೆ ವಿಧಿಸಲು ಅವಕಾಶ ಇದೆ. ಅಲ್ಲದೆ ರೂ. 20,000 ದಿಂದ ರೂ. 50,000ದವರೆಗೆ ದಂಡ ಅಥವಾ ಎರಡನ್ನು ವಿಧಿಸಬಹುದಾಗಿದೆ.

ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರ ಪುನರ್ವಸತಿಗಾಗಿ  20,000 ರೂ. ಕಾರ್ಪಸ್ ನಿಧಿಯನ್ನು ಪಾವತಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ ಎಚ್ಚರಿಸಿದ್ದಾರೆ.

ಬಾಲಕಾರ್ಮಿಕ ನಿಷೇಧದ ಬಗ್ಗೆ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಶಿಬಿರಗಳನ್ನು ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗಿದೆ. 2011-12ನೆ ಸಾಲಿನಿಂದ ಇದುವರೆಗೆ ಒಟ್ಟು 26 ಬಾಲಕಾರ್ಮಿಕರನ್ನು ಪತ್ತೆ ಹಚ್ಚಲಾಗಿದೆ.

2016-17ನೆ ಸಾಲಿನಲ್ಲಿ 2 ಹಾಗೂ 2017-18ನೆ ಸಾಲಿನಲ್ಲಿ 1 ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡಿರುವ ಬಗ್ಗೆ ಪ್ರಕರಣವನ್ನು ದಾಖಲಿಸಲಾಗಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ-1986ರ ಕಲಂ-17ರಡಿ ನಿರೀಕ್ಷಕರನ್ನಾಗಿ ನೇಮಿಸಿದ್ದು, ಗ್ರಾಮ ಮಟ್ಟದಲ್ಲಿ ಬಾಲಕಾರ್ಮಿಕತೆಯನ್ನು ನಿಯಂತ್ರಿಸುವ ಹೊಣೆಗಾರಿಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾಗಿರುತ್ತಾರೆ.

ಬಾಲಕಾರ್ಮಿಕ ಪ್ರಕರಣಗಳು ಕಂಡು ಬಂದಲ್ಲಿ ಸಂಬಂಧಿಸಿದ ಮಾಲಕರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಯವರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News