ನಿಷೇಧಿತ ಪಿಸ್ತೂಲ್ ಬಳಕೆ: ಅಪರಾಧಿಗೆ ಶಿಕ್ಷೆ, ದಂಡ

Update: 2017-08-24 15:59 GMT

ಮಂಗಳೂರು, ಆ. 24: ನಿಷೇಧಿತ ಪಿಸ್ತೂಲ್ ಬಳಕೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಪ್ರಧಾನ ಸತ್ರ ನ್ಯಾಯಾಲಯವು ಅಪರಾಧಿ ಯೋರ್ವನಿಗೆ 5 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಹಳೆಯಂಗಡಿ ಗ್ರಾಮದ ಕಳಿಯಾ ಅಗ್ಗಿದ ಕಳಿಯಾ ಶಂಕರ ವಿಠಲ ಕಂಪೌಂಡ್ ನಿವಾಸಿ ಭಾಸ್ಕರ ಯಾನೆ ಬಾಚು (33) ಶಿಕ್ಷೆಗೊಳಗಾದ ಅಪರಾಧಿ.

ದಂಡದ ಮೊತ್ತ ಪಾವತಿಸಲು ತಪ್ಪಿದರೆ ಮತ್ತೆ ಒಂದು ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: 2010 ನವೆಂಬರ್ 15ರಂದು ಅಪರಾಧ ಎಸಗುವ ಉದ್ದೇಶದಿಂದ ಭಾಸ್ಕರ ಸುರತ್ಕಲ್ ಗ್ರಾಮದ ಎಚ್.ಎಂ.ಸಿ. ವೇ ಬ್ರಿಡ್ಜ್ ಬಳಿ ಸಂಜೆ 4.30ಕ್ಕೆ ನಿಷೇಧಿತ ಪಿಸ್ತೂಲನ್ನು ಪ್ಯಾಂಟ್‌ನ ಸೊಂಟದಲ್ಲಿ ಸಿಕ್ಕಿಸಿಕೊಂಡಿದ್ದ. ಖಚಿತ ಮಾಹಿತಿ ಪಡೆದ ಸುರತ್ಕಲ್ ಠಾಣೆಯ ಅಂದಿನ ಪಿಎಸ್‌ಐ ರಮೇಶ ಹಾನಪುರ ಅವರು ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿ ಅಕ್ರಮ ಪಿಸ್ತೂಲ್ ಸಹಿತ ಆರೋಪಿಯನ್ನು ಬಂಧಿಸಿದ್ದರು.

ಭಾರತೀಯ ಆಯುಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಭಾಸ್ಕರ್ ವಶದಲ್ಲಿದ್ದ ಪಿಸ್ತೂಲ್ ನಿಷೇಧಿತ ಅಗ್ನಿ ಅಸ್ತ್ರ ಎಂದು ತಜ್ಞ ಎನ್.ಜಿ.ಪ್ರಭಾಕರ್ ಸಾಕ್ಷಿ ನುಡಿದಿದ್ದರು. ಇತ್ತಂಡಗಳ ವಾದ ಆಲಿಸಿ ನ್ಯಾಯಾಧೀಶರಾದ ಕೆ.ಎಸ್.ಬೀಳಗಿ ಅವರು ಅಪರಾಧಿ ತಪ್ಪಿತಸ್ಥರೆಂದು ಘೋಷಿಸಿ ಶಿಕ್ಷೆ ಪ್ರಕಟಿಸಿದ್ದಾರೆ. ಸರಕಾರದ ಪರವಾಗಿ ಪುಷ್ಪರಾಜ ಅಡ್ಯಂತಾಯ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News