×
Ad

ಮೆಕ್ಸಿಕೊ ಗೋಡೆಗೆ ಹಣ ಕೊಡದಿದ್ದರೆ ಸರಕಾರವನ್ನೆ ಬಂದ್ ಮಾಡುವೆ: ಕಾಂಗ್ರೆಸ್‌ಗೆ ಟ್ರಂಪ್ ಬೆದರಿಕೆ!

Update: 2017-08-24 22:04 IST

ವಾಶಿಂಗ್ಟನ್, ಆ. 24: ತನ್ನ ಮಹತ್ವಾಕಾಂಕ್ಷೆಯ ಮೆಕ್ಸಿಕೊ ಗಡಿ ಗೋಡೆ ನಿರ್ಮಾಣಕ್ಕೆ ಹಣ ಒದಗಿಸುವಂತೆ ಸಂಸತ್ತು ಕಾಂಗ್ರೆಸ್‌ನೆ ಮೇಲೆ ಒತ್ತಡ ಹೇರುವುದಕ್ಕಾಗಿ ಫೆಡರಲ್ ಸರಕಾರವನ್ನೇ ಮುಚ್ಚುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.

ಆ್ಯರಿರೆನ ರಾಜ್ಯದ ಫೀನಿಕ್ಸ್‌ನಲ್ಲಿ ಮಂಗಳವಾರ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ‘‘ನಮ್ಮ ಸರಕಾರವನ್ನು ಮುಚ್ಚಿದರೆ, ನಮಗೆ ಆ ಗೋಡೆಯನ್ನು ಕಟ್ಟಲು ಸಾಧ್ಯವಾಗುತ್ತದೆ. ಅಮೆರಿಕದ ಜನರು ವಲಸೆ ನಿಯಂತ್ರಣಕ್ಕಾಗಿ ಮತ ಹಾಕಿದ್ದಾರೆ. ನಾವು ಆ ಗೋಡೆಯನ್ನು ಕಟ್ಟುತ್ತೇವೆ’’ ಎಂದು ಹೇಳಿದರು.

ಆ್ಯರಿರೆನ ರಾಜ್ಯವು ಮೆಕ್ಸಿಕೊದೊಂದಿಗೆ 626 ಕಿ.ಮೀ. ಗಡಿ ಹೊಂದಿದೆ.

ಗೋಡೆ ನಿರ್ಮಾಣಕ್ಕಾಗಿ ಟ್ರಂಪ್ ಕಳೆದ ಫೆಡರಲ್ ಬಜೆಟ್‌ನಲ್ಲಿ ಕೇವಲ 1.6 ಬಿಲಿಯ ಡಾಲರ್ (ಸುಮಾರು 10,252 ಕೋಟಿ ರೂಪಾಯಿ) ಪಡೆದಿದ್ದಾರೆ. ಗೋಡೆ ನಿರ್ಮಾಣಕ್ಕೆ ಹಣ ನೀಡದಿದ್ದರೆ ತಾನು ವೆಚ್ಚ ಬಿಲ್‌ಗೆ ಸಹಿ ಹಾಕುವುದಿಲ್ಲ ಎಂಬ ಬೆದರಿಕೆಯನ್ನು ಅವರು ಹಾಕಿದ್ದಾರೆ.

ಅಮೆರಿಕ-ಮೆಕ್ಸಿಕೊ ಗಡಿ ಗೋಡೆ ನಿರ್ಮಾಣಕ್ಕೆ 22 ಬಿಲಿಯ ಡಾಲರ್ (ಸುಮಾರು 1.41 ಲಕ್ಷ ಕೋಟಿ ರೂಪಾಯಿ) ಖರ್ಚು ತಗಲುತ್ತದೆ ಮತ್ತು ಮೂರು ವರ್ಷ ಅವಧಿ ಬೇಕಾಗುತ್ತದೆ ಎಂಬುದಾಗಿ ಪರಿಣತರು ಅಂದಾಜಿಸಿದ್ದಾರೆ.

ರಿಪಬ್ಲಿಕನ್ನರಿಂದಲೇ ಟ್ರಂಪ್‌ಗೆ ತರಾಟೆ

ಅಮೆರಿಕ ಸರಕಾರವನ್ನೇ ಮುಚ್ಚುವೆ ಎಂಬ ಬೆದರಿಕೆ ಹಾಕಿರುವ ಡೊನಾಲ್ಡ್ ಟ್ರಂಪ್‌ರನ್ನು ಅವರ ರಿಪಬ್ಲಿಕನ್ ಪಕ್ಷದ ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ.

ಟ್ರಂಪ್ ಬೆದರಿಕೆಯು ಮಾರುಕಟ್ಟೆಗಳನ್ನು ತಲ್ಲಣಗೊಳಿಸಿರುವುದನ್ನು ಹಾಗೂ ದೇಶದ ಸಾಲ ಮಿತಿಯನ್ನು ಏರಿಸುವ ಹಾಗೂ ವೆಚ್ಚ ಮಸೂದೆಗಳನ್ನು ಅಂಗೀಕರಿಸುವ ಕಾಂಗ್ರೆಸ್‌ನ ಪ್ರಯತ್ನಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವುದನ್ನು ಸ್ಮರಿಸಬಹುದಾಗಿದೆ.

‘‘ಸರಕಾರವನ್ನು ಮುಚ್ಚಲು ಯಾರಾದರೂ ಆಸಕ್ತಿ ಹೊಂದಿದ್ದಾರೆ ಎಂದು ನನಗನಿಸುವುದಿಲ್ಲ’’ ಎಂದು ಕಾಂಗ್ರೆಸ್‌ನಲ್ಲಿರುವ ಅತ್ಯುನ್ನತ ರಿಪಬ್ಲಿಕನ್ ನಾಯಕ ಹಾಗೂ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸ್ಪೀಕರ್ ಪೌಲ್ ರಯಾನ್ ಬುಧವಾರ ಒರೆಗಾನ್‌ನ ಹಿಲ್ಸ್‌ಬೋರೊದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

   ‘‘ಅಕ್ರಮ ವಲಸಿಗರನ್ನು ತಡೆಯಲು ಮೆಕ್ಸಿಕೊ ಗಡಿಯಲ್ಲಿ ಗೋಡೆ ನಿರ್ಮಾಣ ಅವಶ್ಯಕ. ಆದರೆ, ಅದಕ್ಕಾಗಿ ಸರಕಾರವನ್ನು ಮುಚ್ಚುವುದೇ ಕೊನೆಯ ಆಯ್ಕೆ ಎಂಬಂತೆ ಬಿಂಬಿಸಬಾರದು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News