×
Ad

ವಿದ್ಯಾರ್ಥಿನಿಗೆ ಕಿರುಕುಳ: ಇಬ್ಬರು ಆರೋಪಿಗಳ ಬಂಧನ

Update: 2017-08-24 22:04 IST

ಪುತ್ತೂರು, ಆ. 24:  ವಿದ್ಯಾರ್ಥಿನಿಯ ಕೈ ಹಿಡಿದು ಎಳೆದು ಮಾನಭಂಗ ಯತ್ನ ನಡೆಸಿದ ಆರೋಪಿಗಳಿಬ್ಬರ ವಿರುದ್ಧ  ಪುತ್ತೂರು ನಗರ ಠಾಣೆಯ ಪೊಲೀಸರು ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿ,  ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪುತ್ತೂರು ನಗರದ ಹೊರ ವಲಯದ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಜನತಾ ಕಾಲನಿ ನಿವಾಸಿಗಳಾದ ಕಲಂದರ್ (19 ) ಹಾಗೂ ಶಾಬಿತ್ (21 ) ಬಂಧಿತ ಆರೋಪಿಗಳು.

ಕೆಲ ದಿನಗಳ ಹಿಂದೆ ನಗರದ ದರ್ಬೆಯ ವಾಣಿಜ್ಯ ಸಂಕೀರ್ಣ ಒಂದರ ಬಳಿ ಆರೋಪಿ ಶಾಬಿತ್ ಈ ವಿದ್ಯಾರ್ಥಿನಿಗೆ ಚಾಕಲೇಟ್ ನೀಡಿದ್ದು, ಇದನ್ನು ಆಕೆ ನಿರಾಕರಿಸಿದಾಗ ಮತ್ತೊಬ್ಬ ಆರೋಪಿ ಕಲಂದರ್ ವಿದ್ಯಾರ್ಥಿನಿಯ ಕೈ ಹಿಡಿದೆಳೆದು ಮಾನಭಂಗಕ್ಕೆ ಯತ್ನಿಸಿರುವುದಾಗಿ ದೂರಲಾಗಿದೆ. ಕಳೆದ ಮಂಗಳವಾರ ವಿದ್ಯಾರ್ಥಿನಿ ತನ್ನ ಮನೆಯ ಕಂಪೌಂಡ್ ಬಳಿ ನಿಂತಿದ್ದಾಗ ಮತ್ತೆ ಆರೋಪಿಗಳಾದ ಕಲಂದರ್ ಹಾಗೂ ಶಾಬಿತ್ ಬಂದು ಪ್ರೀತಿಸುವಂತೆ ಈಕೆಯ ಬಳಿ ಅನುಚಿತವಾಗಿ ವರ್ತಿಸಿ ಮಾನಭಂಗ ಯತ್ನ ನಡೆಸಿರುವುದಾಗಿ ಆರೋಪಿಸಲಾಗಿದ್ದು, ಈ ಸಂದರ್ಭದಲ್ಲಿ ಇದಕ್ಕೆ ವಿದ್ಯಾರ್ಥಿನಿಯು ಮನೆಯೊಳಗೆ ಓಡಿಹೋಗಿ ಹೆತ್ತವರಿಗೆ ತಿಳಿಸಿದ್ದು, ಈ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ.

ತಮ್ಮನ್ನು ಪ್ರೀತಿಸುವಂತೆ ಒತ್ತಡ ಹೇರಿದ ಈ ಆರೋಪಿಗಳು ಈಕೆಗೆ ಬೆಲೆಬಾಳುವ ವಸ್ತುಗಳನ್ನು ನೀಡುವ ಆಮಿಷ ನೀಡಿದ್ದಾರೆ. ಮೊಬೈಲ್, ಕರೆನ್ಸಿ, ಚಾಕಲೇಟ್ ಹಾಗೂ ವಾಚ್ ಮೊದಲಾದ ವಸ್ತುಗಳನ್ನು ನೀಡುವುದಾಗಿ ತಿಳಿಸಿದ್ದಾರೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದರು. ಪುತ್ತೂರು ನಗರ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News