×
Ad

ಭಾರತ ವಿರೋಧಿ ಕೃತ್ಯಗಳಿಗೆ ಅವಕಾಶವಿಲ್ಲ: ನೇಪಾಳ ಪ್ರಧಾನಿ

Update: 2017-08-25 09:28 IST

ಹೊಸದಿಲ್ಲಿ, ಆ. 25: ನೇಪಾಳದ ಮಣ್ಣಿನಲ್ಲಿ ಭಾರತ ವಿರೋಧಿ ಚಟುವಟಿಕೆಗಳು ಹುಟ್ಟಲು ಅವಕಾಶ ನಿಡುವುದಿಲ್ಲ ಎಂದು ಭಾರತಕ್ಕೆ ಭೇಟಿ ನೀಡಿರುವ ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವೂಬಾ ಸ್ಪಷ್ಟಪಡಿಸಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ಬಳಿಕ ಉಭಯ ದೇಶಗಳ ಆರ್ಥಿಕ ಸಂಬಂಧ ವೃದ್ಧಿಸುವ ಕುರಿತ ಒಪ್ಪಂದಗಳಿಗೆ ಸಹಿ ಮಾಡಿದ ದೇವೂಬಾ ಈ ಘೋಷಣೆ ಮಾಡಿದರು.

"ಭಾರತದಂಥ ಮಿತ್ರರಾಷ್ಟ್ರದ ವಿರುದ್ಧದ ಯಾವುದೇ ಚಟುವಟಿಕೆಗಳಿಗೆ ನೇಪಾಳದ ನೆಲದಲ್ಲಿ ಅವಕಾಶವಿಲ್ಲ. ಬದಲಾಗಿ ನಮ್ಮ ಕಡೆಯಿಂದ ಭಾರತಕ್ಕೆ ಸಾಧ್ಯವಾದ ಎಲ್ಲ ನೆರವು ಹಾಗೂ ಸಹಕಾರ ನೀಡುತ್ತೇವೆ" ಎಂದು ನುಡಿದರು.

ಏಷ್ಯಾದ ದೈತ್ಯಶಕ್ತಿಗಳಾದ ಭಾರತ ಹಾಗೂ ಚೀನಾ ನಡುವಿನ ಗಡಿ ಸಂಘರ್ಷ ಹಾಗೂ ನೇಪಾಳದ ಓಲೈಕೆಗೆ ಚೀನಾ ಪ್ರಯತ್ನ ನಡೆಸುತ್ತಿರುವ ಹಿನ್ನೆಲೆಯಲ್ಲಿ ದೇವೂಬಾ ಹೇಳಿಕೆ ವಿಶೇಷ ಮಹತ್ವ ಪಡೆದಿದೆ. ಉಭಯ ದೇಶಗಳ ನಡುವಿನ ವಿಶ್ವಾಸ ಹಾಗೂ ತಿಳುವಳಿಕೆಯನ್ನು ಹೆಚ್ಚಿಸಿ, ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಸಲುವಾಗಿ ಭಾರತ ನೇಪಾಳಕ್ಕೆ ಹೆಚ್ಚಿನ ನೆರವು ನೀಡಬೇಕು ಎಂದೂ ದೇವೂಬಾ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರಿದರು.

ನೇಪಾಳ ಭಾರತದ ಜತೆ ಐತಿಹಾಸಿಕ ಸಂಬಂಧ ಹೊಂದಿದೆ. ಈ ಭೇಟಿ ನೇಪಾಳದ ಸಮಗ್ರ ಅಭಿವೃದ್ಧಿಯ ಪಾಲುದಾರಿಕೆಯನ್ನು ಇನ್ನಷ್ಟು ವಿಸ್ತತಗೊಳಿಸಲು ನೆರವಾಗಲಿದೆ ಹಾಗೂ ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News