ತಂದೆಯ ತೀರ್ಪಿನ ವಿರುದ್ಧ ಮಗನ ಆದೇಶ!
ಹೊಸದಿಲ್ಲಿ, ಆ. 25: ಖಾಸಗಿತನವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಿ ಸುಪ್ರೀಂಕೋರ್ಟ್ ಗುರುವಾರ ತೀರ್ಪು ನೀಡಿದೆ. 547 ಪುಟಗಳ ಈ ಮಹತ್ವದ ಆದೇಶದಿಂದಾಗಿ ಸಣ್ಣ ನ್ಯಾಯಪೀಠಗಳ ಮುಂದೆ ಇರುವ ಹಲವು ಪ್ರಕರಣಗಳು ಚರ್ಚೆಗೆ ಬರಲು ವೇದಿಕೆ ಸಜ್ಜುಗೊಂಡಿದೆ.
ಒಂಬತ್ತು ಮಂದಿ ನ್ಯಾಯಮೂರ್ತಿಗಳ ನ್ಯಾಯಪೀಠದ ಸದಸ್ಯರಾಗಿದ್ದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ತಮ್ಮ ತಂದೆ ನ್ಯಾಯಮೂರ್ತಿ ವೈ.ವಿ. ಚಂದ್ರಚೂಡ್ ನೀಡಿದ್ದ ತೀರ್ಪನ್ನು ತಳ್ಳಿಹಾಕಿ ತೀರ್ಪು ನೀಡಿರುವುದು ವಿಶೇಷ.
ಎಡಿಎಂ ಜಬಲ್ಪುರ ಮತ್ತು ಶಿವಕಾಂತ್ ಶುಕ್ಲಾ ನಡುವಿನ ಪ್ರಕರಣದಲ್ಲಿ 1975ರಲ್ಲಿ ತಂದೆ ನೀಡಿದ್ದ ತೀರ್ಪಿನ ವಿರುದ್ಧ ಇದೀಗ ಮಗ ತೀರ್ಪು ನೀಡಿದ್ದಾರೆ.
"ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿಗೆ ಯಾವುದೇ ಮುದ್ರೆ ಇಲ್ಲ. ಆದ್ದರಿಂದ ಇದು ಸಂವಿಧಾನ ನೀಡಿದ ಹಕ್ಕೇ ಅಥವಾ ಸಂವಿಧಾನ ಪೂರ್ವದ ಯುಗದಲ್ಲಿ ಇದ್ದ ಹಕ್ಕೇ ಎಂಬ ನಿರ್ಧಾರಕ್ಕೆ ಬರುವುದು ಸಾಧ್ಯವಿಲ್ಲ" ಎಂದು 1975ರ ತೀರ್ಪಿನಲ್ಲಿ ನ್ಯಾಯಮೂರ್ತಿ ವೈ.ವಿ. ಚಂದ್ರಚೂಡ್ ಅಭಿಪ್ರಾಯಪಟ್ಟಿದ್ದರು.
ಆದರೆ ಗುರುವಾರ ನೀಡಿದ ತೀರ್ಪಿನಲ್ಲಿ ಡಿ.ವೈ. ಚಂದ್ರಚೂಡ್, "ಎಡಿಎಂ ಜಬಲ್ಪುರ ಪ್ರಕರಣದಲ್ಲಿ ನಾಲ್ವರು ನ್ಯಾಯಮೂರ್ತಿಗಳು ನೀಡಿದ ಬಹುಮತದ ತೀರ್ಪು ಗಂಭೀರ ದೋಷದಿಂದ ಕೂಡಿದೆ" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಜೀವನ ಹಾಗೂ ವೈಯಕ್ತಿಕ ಸ್ವಾತಂತ್ರ್ಯ ಮಾನವ ಅಸ್ತಿತ್ವಕ್ಕೆ ಅನಿವಾರ್ಯ. ಕೇಶವಾನಂದ ಭಾರತಿ ಪ್ರಕರಣದಲ್ಲಿ ಗುರುತಿಸಿದಂತೆ ಈ ಹಕ್ಕುಗಳು ಅನಾದಿಕಾಲದಿಂದಲೂ ಇವೆ. ಇವು ನೈಸರ್ಗಿಕ ನಿಯಮಗಳಲ್ಲೇ ಸೇರಿವೆ. ವ್ಯಕ್ತಿಯ ಬದುಕಿನಲ್ಲಿ ಮಾನವತೆಯ ಅಂಶಗಳು ಬದುಕಿನ ಪಾವಿತ್ರ್ಯದಲ್ಲೇ ಅಂತರ್ಗತವಾಗಿವೆ" ಎಂದು ಖಾಸಗಿತನದ ಹಕ್ಕು ಕುರಿತ ಐತಿಹಾಸಿಕ ತೀರ್ಪಿನಲ್ಲಿ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.
ಸ್ವಾತಂತ್ರ್ಯದ ಜತೆ ಘನತೆ ಕೂಡಾ ಸೇರಿದೆ. ಯಾವುದೇ ನಾಗರಿಕ ಸರ್ಕಾರ ವೈಯಕ್ತಿಕ ಸ್ವಾತಂತ್ರ್ಯವನ್ನು ಸೂಕ್ತ ಕಾನೂನಿನ ಅಧಿಕಾರವಿಲ್ಲದೇ ಉಲ್ಲಂಘಿಸಲಾಗದು ಎಂದು ಸ್ಪಷ್ಟಪಡಿಸಿದ್ದಾರೆ.