ಸುಪ್ರೀಂ ತೀರ್ಪು: ಎಲ್ಲಾ ತಲಾಖ್ ಪ್ರಕರಣ ಅಸಿಂಧು ?
ಹೊಸದಿಲ್ಲಿ, ಆ. 25: ತ್ರಿವಳಿ ತಲಾಖ್ ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಅಧೀನ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿರುವ ತಲಾಖ್ ಪ್ರಕರಣಗಳು ಅಸಿಂಧುವಾಗುವ ಸಾಧ್ಯತೆಗಳಿವೆ.
ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡಿದ್ದನ್ನು ಪ್ರಶ್ನಿಸಿ ದೇಶಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿರುವ ವಿವಿಧ ಮಹಿಳೆಯರ ವೈವಾಹಿಕ ಸಂಬಂಧಕ್ಕೆ ಮರುಜೀವ ಬರಲಿದೆ.
ಬಾಕಿ ಇರುವ ಎಲ್ಲ ಪ್ರಕರಣಗಳು ಸುಪ್ರೀಂಕೋರ್ಟ್ ತೀರ್ಪಿನ ಆಧಾರದಲ್ಲಿ ನಿರ್ಧಾರವಾಗಲಿವೆ ಎನ್ನುವುದು ಕಾನೂನು ತಜ್ಞರ ಅಭಿಮತ. ಜಾರ್ಖಂಡ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹಾಗೂ ಹಿರಿಯ ವಕೀಲ ಅಜಿತ್ ಸಿನ್ಹಾ ಹೇಳುವಂತೆ, "ಸಂವಿಧಾನದ 141ನೆ ವಿಧಿಯ ಅನ್ವಯ ಸುಪ್ರೀಂಕೋರ್ಟ್‌ನ ಈ ತೀರ್ಪು ಎಲ್ಲಾ ಅಧೀನ ನ್ಯಾಯಾಲಯಗಳಿಗೆ ಅನ್ವಯಿಸುತ್ತದೆ"
ಯಾವುದೇ ಅಧೀನ ನ್ಯಾಯಾಲಯಗಳು ಇದೀಗ ತ್ರಿವಳಿ ತಲಾಖ್ ನ ಕ್ರಮಬದ್ಧತೆಯನ್ನು ಪರಿಶೀಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಿನ್ಹಾ ಸ್ಪಷ್ಟಪಡಿಸಿದ್ದಾರೆ.
ಪಾಟ್ನಾ ಹೈಕೋರ್ಟ್‌ನ ನ್ಯಾಯಮೂರ್ತಿ ನಾಗೇಂದ್ರ ರೈ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಲ್ಲ ವಿಚಾರಣಾ ನ್ಯಾಯಾಲಯಗಳು ಹಾಗೂ ಹೈಕೋರ್ಟ್‌ಗಳು ಸುಪ್ರೀಂಕೋರ್ಟ್ ತೀರ್ಪಿನ ಆಧಾರದಲ್ಲೇ ಇಂಥ ಪ್ರಕರಣಗಳನ್ನು ನಿರ್ಧರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.