ಗಣೇಶೋತ್ಸವ ಸಂಭ್ರಮ: ಪ್ರಮುಖ ಸ್ಥಳಗಳಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪನೆ
ಮಂಗಳೂರು, ಆ. 25: ಚೌತಿ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆಯ ಬಳಿಕ ಭಕ್ತರಿಗೆ ತೆನೆ (ಭತ್ತದ ತೆನೆ)ವಿತರಿಸುವ ಕಾರ್ಯ ನಡೆಯಿತು.
ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ನಗರದ ವಿವಿಧ ಕಡೆಗಳಲ್ಲಿ ಸಾರ್ವಜನಿಕವಾಗಿ ಗಣೇಶನ ವಿಗ್ರಹಗಳನ್ನು ಇಂದು ಬೆಳಗ್ಗಿನಿಂದ ಪ್ರತಿಷ್ಠಾಪಿಸಲಾಗಿದ್ದು, ವಿಶೇಷ ಪೂಜೆಗಳು ವಿಗ್ರಹ ವಿಸರ್ಜನೆಯವರೆಗೆ ನಡೆಯಲಿದೆ. ಹಿಂದೂ ಯುವ ಸೇನೆ ನೇತೃತ್ವದಲ್ಲಿ ನಗರದ ನೆಹರೂ ಮೈದಾನದಲ್ಲಿ ಏಳು ದಿನಗಳ ಕಾಲ ಪೂಜಿಸಲ್ಪಡಲಿರುವ ಗಣೇಶ ವಿಗ್ರಹವನ್ನು ಇಂದು ಬೆಳಗ್ಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು.
ಇದೇ ವೇಳೆ ಬಿಜೈನ ಮಂಗಳೂರು ಕೆಎಸ್‌ಆರ್‌ಟಿಸಿ ಕಚೇರಿ ಎದುರೂ ಗಣೇಶ ವಿಗ್ರಹ ಪ್ರತಿಷ್ಠಾಪಿಸಲಾಗಿದ್ದು, ಐದು ದಿನಗಳ ಕಾಲ ಪೂಜೆಯ ಬಳಿಕ ಗಣೇಶ ವಿಗ್ರಹದ ವಿಸರ್ಜನೆ ನಡೆಯಲಿದೆ. ಬಂಟ್ಸ್ ಹಾಸ್ಟೆಲ್‌ನ ಓಂಕಾರ ನಗರದಲ್ಲಿ ಸಿದ್ದಿ ವಿನಾಯಕ ಪ್ರತಿಷ್ಠಾನದ ವತಿಯಿಂದ ಸಾರ್ವಜನಿಕ ಗಣೇಶೋತ್ಸವ ಸಮಿತಿಯು ಇಂದು ಬೆಳಗ್ಗೆ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದು, ಮೂರು ದಿನಗಳ ಪೂಜೆ ನಡೆದು ಗಣೇಶ ವಿಗ್ರಹವನ್ನು ವಿಸರ್ಜನೆ ಮಾಡಲಾಗುತ್ತದೆ.
ಇದೇ ವೇಳೆ ನಗರದ ಸಂಘನಿಕೇತನ, ಮಂಗಳಾದೇವಿ ಮಹತೋಭಾರ ದೇವಸ್ಥಾನ ಸೇರಿದಂತೆ ಕೆಲವೆಡೆ ಮನೆಗಳಲ್ಲಿಯೂ ಗಣೇಶ ವಿಗ್ರಹ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಪ್ರತೀತಿಯೂ ಮಂಗಳೂರು ನಗರದಲ್ಲಿ ಚಾಲ್ತಿಯಲ್ಲಿದೆ.
ಪರಿಸರ ಸಹ್ಯ ಗಣೇಶನ ಮೂರ್ತಿಗೆ ಒಲವು
ನಗರದಲ್ಲಿ ಈಗಾಗಲೇ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಒಲವು ವ್ಯಕ್ತವಾಗಿದೆ. ಮೂರ್ತಿಗಳನ್ನು ತಯಾರಿಸುವವರು ಕೂಡಾ ಬಹುತೇಕವಾಗಿ ಯಾವುದೇ ರೀತಿಯ ರಾಸಾಯನಿಕ ವಸ್ತುಗಳನ್ನು ಬಳಸದೆ ನೈಸರ್ಗಿಕವಾಗಿ ಗಣೇಶ ವಿಗ್ರಹಗಳ ತಯಾರಿಗೆ ಒತ್ತು ನೀಡಿದ್ದು, ಖರೀದಿದಾರರು ಕೂಡಾ ನೈಸರ್ಗಿಕ ಗಣೇಶನ ವಿಗ್ರಹ ಖರೀದಿಗೆ ಒಲವು ತೋರಿಸಿದ್ದಾರೆ.
ಕೆರೆ, ನದಿ, ಬಾವಿಗಳ ಬಗ್ಗೆ ಇರಲಿ ಗಮನ
ಸಾರ್ವಜನಿಕವಾಗಿ ಹಾಗೂ ಮನೆಗಳಲ್ಲಿ ಪೂಜಿಸುವ ಗಣೇಶ ಮೂರ್ತಿ ವಿಸರ್ಜನೆಯ ಸಂದರ್ಭ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಈಗಾಗಲೇ ಈ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಪರಿಸರ ಇಲಾಖೆ ಕೆಲವೊಂದು ಸೂಚನೆಗಳನ್ನೂ ನೀಡಿದೆ. ರಾಸಾನಿಯಕ ವಸ್ತುಗಳು, ಲೋಹ ಮೊದಲಾದ ಪರಿಸರ ಹಾನಿಕಾರಕ ಬಣ್ಣ, ವಸ್ತುಗಳಿಂದ ತಯಾರಿಸಿದ ಗಣೇಶ ವಿಗ್ರಹಗಳನ್ನು ಕೆರೆ, ನದಿ, ಬಾವಿಗಳಲ್ಲಿ ವಿಸರ್ಜಿಸದಂತೆ ಸಲಹೆಯನ್ನು ನೀಡಿದೆ.
ಶೋಭಾಯಾತ್ರೆಯ ವೇಳೆ ಇರಲಿ ಜಾಗರೂಕತೆ!
ಗಣೇಶೋತ್ಸವ ಹಾಗೂ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ನೇತೃತ್ವದಲ್ಲಿ ವಿಶೇಷ ಶಾಂತಿ ಭೆಯನ್ನು ನಡೆಸಲಾಗಿದೆ.
ಹಬ್ಬವನ್ನು ಸಾರ್ವಜನಿಕವಾಗಿ ನಡೆಸುವವರು ಉತ್ಸವ ನಡೆಸುವ ಜಾಗದಲ್ಲಿ ಪೆಂಡಾಲ್‌ನಲ್ಲಿ ಅಗ್ನಿ ಸುರಕ್ಷತೆ ವ್ಯವಸ್ಥೆ ಮಾಡಿಕೊಂಡಿರಬೇಕು. ಜಾಗದ ಮಾಲಕರಿಂದ ಅನುಮತಿ ಪಡೆದಿರಬೇಕು. ಹಾಗೂ ರಾತ್ರಿ ನಡೆಯುವ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು 10 ಗಂಟೆಗೆ ಮುಗಿಸಬೇಕು. ಶಬ್ಧ ಮಾಲಿನ್ಯದ ಪಟಾಕಿಗಳನ್ನು ಸಿಡಿಸದಂತೆ ಹಾಗೂ ಗಣೇಶ ವಿಸರ್ಜನಯ ವೇಳೆ ನಡೆಸಲಾಗುವ ಶೋಭಾಯಾತ್ರೆಯ ಸಂದರ್ಭ ಶಾಲಾ- ಕಾಲೇಜು, ಆಸ್ಪತ್ರೆ ಸಮೀಪ ಸಾರ್ವಜನಿಕರಿಗೆ ಅಡ್ಡಿಯಾಗದಂತೆ ಜಾಗರೂಕತೆ ವಹಿಸುವಂತೆ ಸಭೆಯಲ್ಲಿ ಸೂಚನೆ ನೀಡಲಾಗಿದೆ.