×
Ad

ಜನರ ಜೊತೆಗಿದ್ದು ಕೆಲಸ ನಿರ್ವಹಿಸಿ: ಸೈಯದ್ ಅಹ್ಮದ್

Update: 2017-08-25 18:33 IST

ಮಂಗಳೂರು, ಆ. 25: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಯ ಅಲ್ಪಸಂಖ್ಯಾತ ಘಟಕದ ಕರಾವಳಿ ವಲಯದ ಅಧ್ಯಕ್ಷರಾಗಿ ಯು.ಬಿ. ಸಲೀಂ ಹಾಗೂ ದ.ಕ. ಜಿಲ್ಲಾ ಘಟಕದ ಅಧ್ಯಕ್ಷರಾಗಿ ಎನ್.ಎಸ್. ಕರೀಂ ಅವರು ಇಂದು ಅಧಿಕಾರ ಸ್ವೀಕರಿಸಿದರು.

ಮಲ್ಲಿಕಟ್ಟೆಯ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಮಾರಂಭವನ್ನು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಅಧ್ಯಕ್ಷ ಸೈಯದ್ ಅಹ್ಮದ್ ಉದ್ಘಾಟಿಸಿದರು. ನೂತನ ಅಧ್ಯಕ್ಷರಿಗೆ ಶುಭಾಶಯ ಕೋರಿದ ಅವರು, ಜನರ ನಡುವೆ ಇದ್ದು ಅವರ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಎಂದು ಕರೆ ನೀಡಿದು.

ಅಲ್ಪಸಂಖ್ಯಾತರು ವಂದೇ ಮಾತರಂ ಹೇಳುವುದಿಲ್ಲ ಎಂಬ ಅಪವಾದವಿದೆ. ಆದರೆ ಇಂದು ಅಲ್ಪಸಂಖ್ಯಾತರೇ ಅಧಿಕ ಸಂಖ್ಯೆಯಲ್ಲಿರುವ ಕಾರ್ಯಕ್ರಮದಲ್ಲಿ ವಂದೇ ಮಾತರಂ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಾವು ವಂದೇ ಮಾತರಂ ಹೇಳುತ್ತೇವೆ, ಜೈ ಹಿಂದ್ ಕೂಡಾ ಹೇಳುತ್ತೇವೆ. ಆದರೆ ಆಗಸ್ಟ್ 15ರಂದು ಲಾಲ್‌ಕಿಲಾದಲ್ಲಿ ನಿಂತು ದೇಶದ ರಾಷ್ಟ್ರ ಧ್ವಜಕ್ಕೆ ವಂದನೆ ಸಲ್ಲಿಸುವವರು ಕೆಳಗೆ ಇಳಿದು ಅದರ ಮಹತ್ವವನ್ನೇ ಮೆರೆತು ಬಿಡುತ್ತಾರೆ ಎಂದು ಹೇಳಿದರು.

ದ.ಕ. ಜಿಲ್ಲೆಯಲ್ಲಿ ಧರ್ಮದ ಹೆಸರಿನಲ್ಲಿ ಹಿಂದೂ ಸಮಾಜದಿಂದ ಮುಸ್ಲಿಂ ಸಮಾಜವನ್ನು ಬೇರ್ಪಡಿಸುವ ಕಾರ್ಯಕ್ರಮ ನಡೆಯುವುದನ್ನು ನೋಡುವಾಗ ಬೇಸರವಾಗುತ್ತದೆ. ಜಿಲ್ಲೆಗೆ ಬೆಂಕಿ ಹಾಕುವಂತಹ ನಾಯಕರು ನಮಗೆ ಬೇಕಾಗಿಲ್ಲ. ಬದಲಾಗಿ ಸಮಾಜವನ್ನು ಸೌಹಾರ್ದತೆಯ ಕೊಂಡಿಯಲ್ಲಿ ಬೆಸೆಯುವ ಸಚಿವ ರಮಾನಾಥ ರೈಯಂತಹ ನಾಯಕರು ನಮಗೆ ಬೇಕಾಗಿದೆ. ಈ ಬಗ್ಗೆ ಕಾರ್ಯಕರ್ತರು ಅರಿತುಕೊಂಡು ಜನರಿಗೆ ಅಗತ್ಯವಾದ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಮಾತನಾಡಿ, ರಾಜಕೀಯವೆಂಬುದು ಗಣಿತವಲ್ಲ. ಇಲ್ಲಿ ಪರಿಹಾರ ಇರುವುದಿಲ್ಲ. ರಾಜಕೀಯವೆಂಬುದು ರಸಾಯನಶಾಸ್ತ್ರದಂತೆ. ಇಲ್ಲಿ ಪ್ರತಿಕ್ರಿಯೆ ಮಾತ್ರ ಸಿಗುವುದು. ಆಡುವ ಮಾತು, ಮಾಡುವ ಕೆಲಸದ ಆಧಾರದಲ್ಲಿ ಇಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಹಾಗಾಗಿ ನಾಯಕರು ಹಾಗೂ ಕಾರ್ಯಕರ್ತರು ತಾವು ಆಡುವ ಮಾತಿನ ಬಗ್ಗೆ ನಿಗಾ ವಹಿಸಬೇಕು. ಮಾಡುವ ಕೆಲಸ ಮೇಲೆ ಶ್ರದ್ಧೆ ಹೊಂದಿರಬೇಕು ಎಂದು ಕಿವಿಮಾತು ಹೇಳಿದರು.

ಧೃತಿಗೆಡದೆ ಕೆಲಸ ನಿರ್ವಹಿಸಿ

ಮತೀಯ ಸೂಕ್ಷ್ಮ ಜಿಲ್ಲೆಯಲ್ಲಿ ದ್ವೇಷಪೂರಿತ ಅಭಿಯಾನವನ್ನು ಸಂಘ ಪರಿವಾರ ನಡೆಸುತ್ತಿದೆ. ವದಂತಿಗಳ ಮೂಲಕ ಪಕ್ಷದ ನಾಯಕರನ್ನು, ಕಾರ್ಯಕರ್ತರ ವರ್ಚಸ್ಸನ್ನು ಕಸಿಯುವ ಕೆಲಸವನ್ನು ನಡೆಸಲಾಗುತ್ತದೆ. ಅದಕ್ಕೆಲ್ಲಾ ಧೃತಿಗೆಡದೆ ಕಾರ್ಯ ನಿರ್ವಹಿಸುವ ಕೆಲಸವನ್ನು ಅಲ್ಪಸಂಖ್ಯಾತ ನಾಯಕರು ಹಾಗೂ ಕಾರ್ಯಕರ್ತರು ಮಾಡಬೇಕೆಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ವಹಿಸಿದ್ದರು.

ವೇದಿಕೆಯಲ್ಲಿ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜಾ, ಶಾಸಕ ಮೊಯ್ದಿನ್ ಬಾವಾ, ಮೂಡಾ ಅಧ್ಯಕ್ಷ ಸುರೇಶ್ ಬಳ್ಳಾಲ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ರಾಜ್ಯ ಸಭೆಯ ಮಾಜಿ ಸದಸ್ಯ ಬಿ. ಇಬ್ರಾಹೀಂ, ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ನಿಕಟಪೂರ್ವ ಅಧ್ಯಕ್ಷ ಎಂ.ಎಸ್. ಮುಹಮ್ಮದ್, ಜಿಲ್ಲಾ ಕಾಂಗ್ರೆಸ್ ಮಾಜಿ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಎನ್‌ಎಸ್‌ಯುಐನ ಜಿಲ್ಲಾಧ್ಯಕ್ಷ ಅಬ್ದುಲ್ಲಾ, ಯುವ ಕಾಂಗ್ರೆಸ್‌ನ ಉಪಾಧ್ಯಕ್ಷ ಲುಕ್ಮಾನ್, ನಾಯಕರಾದ ಅಝೀಝ್ ಹೆಜಮಾಡಿ, ನೂರುದ್ದೀನ್ ಸಾಲ್ಮರ, ಸಂತೋಷ್ ಕುಮಾರ್ ಶೆಟ್ಟಿ, ಅಶ್ರಫ್, ಅಬ್ಬಾಸ್ ಹಾಜಿ ಸಜಿಪ, ರಮೇಶ್ ಶೆಟ್ಟಿ, ಸುದರ್ಶನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕೈಯಲ್ಲಿ ನಡೆದರೂ ರೈಯನ್ನು ಸೋಲಿಸಲಾಗದು: ಸಚಿವ ಖಾದರ್

ಸಚಿವ ರಮಾನಾಥ ರೈ ವಿರುದ್ಧ ಬಿಜೆಪಿಯವರು ಬೆಂಗಳೂರಿನಿಂದ ಬೈಕ್ ರ‍್ಯಾಲಿ ಆರಂಭಿಸಿರುವುದನ್ನು ಉಲ್ಲೇಖಿಸಿ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್, ಅವರು ಬೈಕ್ ರ‍್ಯಾಲಿ ಅಲ್ಲ, ತಲೆ ಕೆಳಗೆ ಮಾಡಿ ಕೈಯಲ್ಲಿ ನಡೆದುಕೊಂಡು ಬಂದರೂ ಸಚಿವ ರೈಯನ್ನು ಸೋಲಿಸಲು ಸಾಧ್ಯವಿಲ್ಲ. ಹಿಂದಿನ ಚುನಾವಣೆಯಲ್ಲಿ 18,000 ಮತಗಳ ಅಂತರದಿಂದ ಸಚಿವ ರೈ ಗೆದ್ದಿದ್ದಾರೆ, ಮುಂದಿನ ಚುನಾವಣೆಯಲ್ಲಿ 20,000 ಕ್ಕೂ ಅಧಿಕ ಮತಗಳ ಅಂತರದಿಂದ ಅವರು ಜಯಗಳಿಸಲಿದ್ದಾರೆ ಎಂದು ಹೇಳಿದರು.

ಹೋರಾಟ ಮಾಡಿ ಬಂದವ ನಾನು: ಸಚಿವ ರೈ

ಕಾಂಗ್ರೆಸ್‌ನ ಜಾತ್ಯತೀತ ಸಿದ್ಧಾಂತತ ಬಗ್ಗೆ ಬಿಜೆಪಿಯಿಂದ ಪಾಠ ಕಲಿಯಬೇಕಾಗಿಲ್ಲ. ಮತೀಯವಾದಿಗಳು ಇಂದು ನನ್ನ ರಾಜೀನಾಮೆ ಕೇಳುವ ಪರಿಸ್ಥಿತಿ ಬಂದಿದೆ. ಇದು ನಾನು ಜಾತ್ಯಾತೀತ ವಾದಿ ಎಂಬುದಕ್ಕೆ ಸಾಕ್ಷಿಯಾಗಿದೆ. ಅಷ್ಟು ಸುಲಭದಲ್ಲಿ ರಾಜೀನಾಮೆ ಕೊಡುವ ವ್ಯಕ್ತಿ ಈ ರೈ ಅಲ್ಲ. ಸೋಲನ್ನು ಒಪ್ಪಿಕೊಳ್ಳದೆ, ಹೋರಾಟ ಮಾಡಿ ಬಂದವ ನಾನು ಎಂದು ಸಚಿವ ರೈಯವರು ತನ್ನ ವಿರುದ್ಧ ನಡೆದ ಪ್ರತಿಭಟನೆಗೆ ಸಭೆಯಲ್ಲಿ ಪ್ರತಿಕ್ರಿಯೆ ನೀಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News