×
Ad

ಹಜ್ ಯಾತ್ರೆ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆಯ ಆರೋಪ: ಸಂಸ್ಥೆಯ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು

Update: 2017-08-25 19:31 IST

ಮಂಗಳೂರು, ಆ.25: ಹಜ್ ಯಾತ್ರೆ ಕೈಗೊಳ್ಳಲು ವೀಸಾ ನೀಡುವುದಾಗಿ ಹೇಳಿ 95 ಮಂದಿ ಆಕಾಂಕ್ಷಿ ಯಾತ್ರಾರ್ಥಿಗಳಿಂದ ತಲಾ 70 ಸಾವಿರ ರೂ.ನಂತೆ ಪಡೆದುಕೊಂಡು ಟ್ರಾವೆಲ್ಸ್ ಸಂಸ್ಥೆಯೊಂದು ವಂಚನೆ ಮಾಡಿರುವುದಾಗಿ ಉಡುಪಿ ನಿವಾಸಿ ಎಂ.ಪಿ. ಮೊಯ್ದಿನಬ್ಬ ಎಂಬವರು ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

2017ರ ಹಜ್ ಯಾತ್ರೆಗೆ ಸಂಬಂಧಿಸಿದಂತೆ, ಮಂಗಳೂರಿನ ಮಿಶನ್‌ಸ್ಟ್ರೀಟ್‌ನ ರೀಗಲ್ ಪ್ಲಾಝಾದಲ್ಲಿ ಕಾರ್ಯಾಚರಿಸುತ್ತಿರುವ ಶಹದಾ ಟ್ರಾವೆಲ್ಸ್ ಸಂಸ್ಥೆಯು ಕಳೆದ ಜೂನ್ ತಿಂಗಳಲ್ಲಿ ಹಜ್‌ಗೆ ಹೋಗುವವರಿಗೆ ನಾನಾ ಕಾರಣಗಳಿಂದಾಗಿ ವೀಸಾಗಳು ಉಳಿಕೆಯಾಗಿವೆ ಎಂದು ತಿಳಿಸಿತ್ತು. ಮೊದಲು 35,000 ರೂ. ಮತ್ತು ನಂತರ 35,000 ರೂ. ನೀಡುವಂತೆ ತಿಳಿಸಿ ಪಾಸ್‌ಪೋರ್ಟ್‌ಗಾಗಿ ಸಂಸ್ಥೆಯವರು ಒತ್ತಾಯಿಸಿದ್ದರು. ಅದರಂತೆ ನಾನು ನನ್ನ ಪಾಸ್‌ಪೋರ್ಟ್ ಹಾಗೂ 35,000 ರೂ. ಜೂನ್ 21ರಂದು ಮತ್ತು ಆಗಸ್ಟ್ 16ರಂದು ಮತ್ತೆ 35,000 ರೂ. ಸೇರಿದಂತೆ ಒಟ್ಟು 70 ಸಾವಿರ ರೂ. ಪಾವತಿ ಮಾಡಿರುತ್ತೇನೆ. ಆ. 25ರೊಳಗೆ ವೀಸಾ ನೀಡಿ ಹಜ್ ಯಾತ್ರೆಗೆ ತಯಾರಾಗುವಂತೆ ನನಗೆ ತಿಳಿಸಲಾಗಿತ್ತು. ಆದರೆ ಆ. 21ರಿಂದ ನಿನ್ನೆ ಸಂಜೆ 7 ಗಂಟೆಯವರೆಗೆ ನಿರಂತರವಾಗಿ ನನಗೆ ಹಾಗೂ ಸುಮಾರು 95 ಮಂದಿಗೆ ಸುಳ್ಳು ಮಾಹಿತಿ ನೀಡಿದ್ದರು. ನಿನ್ನೆ 8 ಗಂಟೆಗೆ ಕರೆ ಮಾಡಿ ಎಲ್ಲಾ ವೀಸಾಗಳು ರದ್ದಾಗಿವೆ ಎಂದು ಸಂಸ್ಥೆಯವರು ತಿಳಿಸಿದ್ದಾರೆ.

ನಾನು ಹಜ್ ಯಾತ್ರೆಗಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೆ. ನಂತರ ವಿಚಾರಿಸಿದಾಗ ನನ್ನಂತೆಯೇ ಸುಮಾರು 95 ಮಂದಿಗೆ ಇದೇ ರೀತಿ ಅನ್ಯಾಯವಾಗಿರುವುದು ತಿಳಿದು ಬಂತು. ಈ ಸಂಸ್ಥೆಯ ಮಾಲಕರು ಹಾಗೂ ಏಜೆಂಟರಿಂದ ನನಗೆ ಹಾಗೂ ಇತರ ಹಲವರಿಗೆ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ತೊಂದರೆಯಾಗಿದೆ. ಅಲ್ಲದೆ ಪವಿತ್ರ ಹಜ್ ಯಾತ್ರೆ ಹೆಸರಿನಲ್ಲಿ ಅವಮಾನ ಮಾಡುವ ಕೃತ್ಯವೂ ಆಗಿದೆ. ನಮ್ಮೆಲ್ಲರ ಪಾಸ್‌ಪೋರ್ಟ್ ಹಾಗೂ ಹಣ ಅವರ ಕೈಯ್ಯಲ್ಲಿದೆ.

ಇವರಿಗೆ ಭಾರತದ ಹಜ್ ಕಮಿಟಿಯ ಪದಾಧಿಕಾರಿಗಳು, ರಾಜಕೀಯ ನಾಯಕರ ಬೆಂಬಲವೂ ಇದೆ ಎಂದು ದೂರುದಾರರು ಆರೋಪಿಸಿದ್ದಾರೆ. ಜನರನ್ನು ವಂಚಿಸುವ ಈ ಸಂಸ್ಥೆಯವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ಎಂ.ಪಿ. ಮೊಯ್ದಿನಬ್ಬ ಅವರು, ಮಂಗಳೂರು ಪೊಲೀಸ್ ಆಯುಕ್ತರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News