×
Ad

ಕಾಂಗ್ರೆಸ್ ಕಚೇರಿಯಲ್ಲಿ ಲಿಫ್ಟ್ ಬ್ಲಾಕ್: ಅಗ್ನಿ ಶಾಮಕ ಸಿಬ್ಬಂದಿಯಿಂದ 6 ಮಂದಿಯ ರಕ್ಷಣೆ

Update: 2017-08-25 20:22 IST

ಮಂಗಳೂರು, ಆ. 25: ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಆಯೋಜಿಸಲಾಗಿದ್ದ ಕಾರ್ಯಕ್ರಮದ ಬಳಿಕ ಲಿಫ್ಟ್ ನಲ್ಲಿ ತೆರಳುತಿದ್ದ ಕಾರ್ಯಕರ್ತರು ಲಿಫ್ಟ್ ನಲ್ಲಿ ಇಳಿಯುತ್ತಿದ್ದ ಸಂದರ್ಭ ಓವರ್ ಲೋಡ್ ಆಗಿ ಲಿಫ್ಟ್ ಬ್ಲಾಕ್ ಆದ ಘಟನೆ ನಡೆಯಿತು.

ಇದರಿಂದಾಗಿ ಸುಮಾರು 6 ಮಂದಿ ಕಾರ್ಯಕರ್ತರು ಸುಮಾರು 10 ನಿಮಿಷಕ್ಕೂ ಅಧಿಕ ಸಮಯ ಲಿಫ್ಟ್ ನೊಳಗೆ ಬಾಕಿಯಾಗಿ ಅಪಾಯದ ಪರಿಸ್ಥಿತಿ ನಿರ್ಮಾಣವಾಯಿತು. ಸಕಾಲದಲ್ಲಿ ಆಗಮಿಸಿದ ಆಗ್ನಿ ಶಾಮಕ ಸಿಬ್ಬಂದಿ ಲಿಫ್ಟ್ ನಲ್ಲಿ ಸಿಲುಕಿದ್ದ ಕಾರ್ಯಕರ್ತರನ್ನು ರಕ್ಷಿಸಿದರು.

'ಸಂಜೆ ಸುಮಾರು 4:40ರ ವೇಳೆ ನಮಗೆ ಪ್ರಸಾದ್ ಎಂಬವರಿಂದ ಕರೆಯೊಂದು ಬಂದಿದ್ದು, ಕಾಂಗ್ರೆಸ್ ಕಚೇರಿಯ ಲಿಫ್ಟ್ ಬ್ಲಾಕ್ ಆಗಿ ಆರು ಮಂದಿ ಸಿಲುಕಿಕೊಂಡಿರುವುದಾಗಿ ತಿಳಿಸಿದ್ದರು. ಅದರಂತೆ ಪಾಂಡೇಶ್ವರ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಆಪಾಯದಲ್ಲಿದ್ದವರನ್ನು ರಕ್ಷಿಸಲಾಗಿದೆ' ಎಂದು ಅಗ್ನಿ ಶಾಮಕ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

ಲಿಫ್ಟ್ ಓವರ್ ಲೋಡ್ ಆಗಿ ಮಧ್ಯದಲ್ಲೇ ಬ್ಲಾಕ್ ಆಗಿತ್ತು ಇದರಿಂದಾಗಿ ಲಿಫ್ಟ್ ನೊಳಗಿದ್ದವರು ಕೆಲ ಕಾಲ ಭಯಕ್ಕೆ ಒಳಗಾಗಿದ್ದರು. ಸಕಾಲದಲ್ಲಿ ದೂರವಾಣಿ ಕರೆ ಬಂದ ಹಿನ್ನೆಲೆಯಲ್ಲಿ ತಕ್ಷಣ ರಕ್ಷಣೆ ಒದಗಿಸಲು ಸಾಧ್ಯವಾಯಿತು. ಈ ನಡುವೆ  ಬ್ಲಾಕ್ ಆಗಿದ್ದ ಲಿಫ್ಟ್ ನಿಂದ ಕಾರ್ಯಕರ್ತರನ್ನು ಹೊರತರುವ ನಿಟ್ಟಿನಲ್ಲಿ ಅಲ್ಲಿದ್ದ ಕೆಲವರು ಕಬ್ಬಿಣದ ಸರಳಿನ ಮೂಲಕ ಲಿಫ್ಟ್ ತೆರೆಯಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.

ಪಾಂಡೇಶ್ವರ ಠಾಣೆಯ ಸಹಾಯಕ ಅಗ್ನಿ ಶಾಮಕ ಠಾಣಾಧಿಕಾರಿ ಸಂಜೀವ, ಸಿಬ್ಬಂದಿಗಳಾದ ಸುರೇಶ್ ಶೆಟ್ಟಿ, ಸತೀಶ್ ಶ್ರೀಯಾನ್, ಉತ್ತರಾಯಣ, ದೀಪಕ್ ಸುಭಾಶ್ ಮೊದಲಾದವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ರಕ್ಷಣೆಗಾಗಿ ಕದ್ರಿ ಠಾಣೆಯಿಂದ ರಕ್ಷಣಾ ವಾಹನವನ್ನು ಕೂಡ ಸ್ಥಳಕ್ಕೆ ತರಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News