ಆ.28ರಂದು ರೋಹ್ಟಕ್ ಜೈಲಿನ ಆವರಣದಲ್ಲೇ ಗುರ್ಮೀತ್ ಸಿಂಗ್ ಗೆ ಶಿಕ್ಷೆ ಪ್ರಕಟ
ಪಂಚಕುಲಾ, ಆ.26: ಅತ್ಯಾಚಾರ ಪ್ರಕರಣದ ದೋಷಿ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಬಾಬಾ ಗುರ್ಮೀತ್ ಸಿಂಗ್ ಗೆ ಆ.28ರಂದು ರೋಹ್ಟಕ್ ನ ಸುನಾರಿಯಾ ಜೈಲಿನ ಆವರಣದಲ್ಲೇ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾ. ಜಗದೀಪ್ ಸಿಂಗ್ ಶಿಕ್ಷೆ ಪ್ರಕಟಿಸಲಿದ್ದಾರೆ.
ಜೈಲಿನ ಆವರಣದಲ್ಲೇ ಈ ಉದ್ದೇಶಕ್ಕಾಗಿ ಸಿಬಿಐ ವಿಶೇಷ ನ್ಯಾಯಾಲಯದ ವ್ಯವಸ್ಥೆ ಮಾಡಲಾಗಿದೆ. ಪಂಚಕುಲಾ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ನ್ಯಾ. ಜಗದೀಪ್ ಸಿಂಗ್ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲು ರೋಹ್ಟಕ್ ಗೆ ಹೆಲಿಕಾಪ್ಟರ್ ನಲ್ಲಿ ತೆರಳಲಿರುವರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪಂಚಕುಲಾದ ಸಿಬಿಐ ನ್ಯಾಯಾಲಯವು ಶುಕ್ರವಾರ ಗುರ್ಮಿತ್ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿತ್ತು. ಶಿಕ್ಷೆಯ ಪ್ರಮಾಣವನ್ನು ಸೋಮವಾರ ಘೋಷಿಸಲಿದೆ. ಗುರ್ಮಿತ್ ಸಿಂಗ್ ದೋಷಿ ಎಂದು ನ್ಯಾಯಾಲಯವು ತೀರ್ಪು ನೀಡಿದ ಬೆನ್ನಲ್ಲೆ ಪೊಲೀಸರು ಅಪರಾಧಿ ಗುರ್ಮಿತ್ ಸಿಂಗನನ್ನು ವಶಕ್ಕೆ ತೆಗೆದುಕೊಂಡು, ಸೇನೆಯ ವಶಕ್ಕೆ ಒಪ್ಪಿಸಿದ್ದರು. ಸೇನಾ ಯೋಧರು ರೋಹ್ಟಕ್ ಜೈಲಿಗೆ ಗುರ್ಮಿತ್ ಸಿಂಗ್ ನನ್ನು ಹೆಲಿಕಾಪ್ಟರ್ ಮೂಲಕ ಕರೆದುಕೊಂಡು ಹೋಗಿದ್ದರು.