×
Ad

ಜಿಲ್ಲೆಯ ಹಿರಿಯ ಸಾಧಕರಿಗೆ ‘ಶ್ರೀನಿವಾಸ ಮಲ್ಯ ಗೌರವ ಪ್ರಶಸ್ತಿ’, 2 ಲಕ್ಷ ರೂ. ನಗದು

Update: 2017-08-26 17:31 IST

ಕ್ರೀಡೆ, ಶಿಕ್ಷಣ, ಕಲಾ ಸಾಧಕರಿಗೂ ಪ್ರತ್ಯೇಕ ಪ್ರಶಸ್ತಿಗಳು!

ಮಂಗಳೂರು, ಆ. 26: ಅವಿಭಜಿತ ದ.ಕ. ಜಿಲ್ಲೆಗೆ ಹಲವಾರು ರೀತಿಯ ಕೊಡುಗೆಗಳನ್ನು ನೀಡಿರುವ ಉಳ್ಳಾಲ ಶ್ರೀನಿವಾಸ ಮಲ್ಯ ಅವರ ಹುಟ್ಟುಹಬ್ಬದ ಪ್ರಯುಕ್ತ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಜಿಲ್ಲೆಯ ಹಿರಿಯ ಸಾಧಕರೊಬ್ಬರಿಗೆ ‘ಶ್ರೀನಿವಾಸ ಮಲ್ಯ ಗೌರವ ಪ್ರಶಸ್ತಿ’ ನೀಡಲು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಮುಂದಾಗಿದ್ದಾರೆ.

ಮನಪಾ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜಿಲ್ಲೆಗೆ ಹಲವು ರೀತಿಯ ಕೊಡುಗೆಗಳನ್ನು ನೀಡಿರುವ ಶ್ರೀನಿವಾಸ ಮಲ್ಯರ ಹೆಸರಿನಲ್ಲಿ ಪ್ರಶಸ್ತಿ ನೀಡಬೇಕೆಂಬ ಕನಸು ತನ್ನದಾಗಿದ್ದು, ಈ ಬಗ್ಗೆ ತಜ್ಞರ ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಗಿದೆ ಎಂದರು.

ತಜ್ಞರಾದ ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ, ಡಾ.ಎನ್.ಕೆ. ತಿಂಗಳಾಯ, ಪ್ರೊ. ಅಬ್ದುಲ್ ರೆಹಮಾನ್, ಪ್ರೊ. ರೀಟಾ ನೊರೊನ್ನಾ, ಮನೋಹರ್ ಪ್ರಸಾದ್‌ ಅವರನ್ನು ಒಳಗೊಂಡ ಸಮಿತಿಯು ಮುಂದಿನ ವಾರ ಸಭೆ ನಡೆಸಿ ಪ್ರಶಸ್ತಿ ಕುರಿತಾಗಿ ರೂಪು ರೇಷೆಗಳನ್ನು ಸಿದ್ಧಪಡಿಸಲಿದೆ. ಪ್ರಶಸ್ತಿ ಜಿಲ್ಲಾ ಮಟ್ಟದ್ದಾಗಿದ್ದು, ಜಿಲ್ಲಾ ಮಟ್ಟದ ಸಾಧಕರ ಆಯ್ಕೆ ನಡೆಯಲಿದೆ. ಸಮಿತಿಯಲ್ಲಿ ಮೇಯರ್, ವಿಪಕ್ಷ ನಾಯಕರು ಹಾಗೂ ಮುಖ್ಯ ಸಚೇತಕರು ಮನಪಾ ವತಿಯಿಂದ ಭಾಗವಹಿಸಲಿದ್ದರೂ, ಪ್ರಶಸ್ತಿ ಆಯ್ಕೆ, ಮಾನದಂಡಗಳ ಕುರಿತಂತೆ ಅಂತಿಮ ನಿರ್ಧಾರ ತಜ್ಞರದ್ದಾಗಿರುತ್ತದೆ ಎಂದವರು ಹೇಳಿದರು.

ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಕೆಂಪೇಗೌಡ ಪ್ರಶಸ್ತಿ ನೀಡುವಂತೆ ಕರಾವಳಿ ಭಾಗದಲ್ಲಿ ಶ್ರೀನಿವಾರ ಮಲ್ಯರು ನೀಡಿದ ಕೊಡುಗೆಗಾಗಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲು ತಾನು ಮುಂದಡಿ ಇಟ್ಟಿದ್ದು, ಈ ವರ್ಷವನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಈ ವಿಷಯವನ್ನು ಮುಂದಿನ ಮನಪಾ ಸಾಮಾನ್ಯ ಸಭೆಯ ಪರಿಷತ್ತಿನಲ್ಲಿ ಮಂಡಿಸುವುದಾಗಿ ಮೇಯರ್ ಕವಿತಾ ಸನಿಲ್ ತಿಳಿಸಿದರು.

ಮಂಗಳೂರು ನಗರ ಮಟ್ಟದಲ್ಲಿ ಕ್ರೀಡೆ, ಶಿಕ್ಷಣ ಹಾಗೂ ಕಲಾ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೂ ಪ್ರತ್ಯೇಕವಾಗಿ ಪ್ರಶಸ್ತಿಗಳನ್ನು ಇದೇ ವೇಳೆ ನೀಡಲಾಗುವುದು. ಶ್ರೀನಿವಾಸ ಮಲ್ಯರ ಹುಟ್ಟು ಹಬ್ಬದ ದಿನವಾದ ನವೆಂಬರ್ 21ರಂದು ನಗರದ ಪುರಭವನದಲ್ಲಿ ಮಂಗಳೂರು ಮಹಾನಗರ ಪಾಲಿಕೆ ದಿನಾಚರಣೆಯೊಂದಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಶ್ರೀನಿವಾಸ ಮಲ್ಯ ಗೌರವ ಪ್ರಶಸ್ತಿಯು ಪ್ರಶಸ್ತಿ ಪತ್ರ, ಫಲ ತಾಂಬೂಲಗಳೊಂದಿಗೆ 2 ಲಕ್ಷ ರೂ. ನಗದು ಮೊತ್ತವನ್ನು ಒಳಗೊಂಡಿರುತ್ತದೆ. ಉಳಿದ ಮೂರು ಪ್ರಶಸ್ತಿಗಳಿಗೆ ತಲಾ 50,000 ರೂ. ನಗದು ನೀಡಲಾಗುವುದು. ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಲಾಗುವುದು ಎಂದು ಮೇಯರ್ ತಿಳಿಸಿದರು.

ಪ್ರಶಸ್ತಿಗಾಗಿ ಯಾವುದೇ ರೀತಿಯ ಅರ್ಜಿ ಸಲ್ಲಿಕೆ ಅಥವಾ ಅರ್ಜಿ ಆಹ್ವಾನಗಳಿಗೆ ಅವಕಾಶ ನೀಡದೆ, ತಜ್ಞರ ಸಮಿತಿಯೇ ಅರ್ಹ ಸಾಧಕರನ್ನು ಅಂತಿಮಗೊಳಿಸಲಿದೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಉಪ ಮೇಯರ್ ರಜನೀಶ್, ಸ್ಥಾಯಿ ಸಮಿತಿ ಅಧ್ಯಕ್ಷೆ  ನಾಗವೇಣಿ, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ವಿಪಕ್ಷ ನಾಯಕ ಗಣೇಶ್ ಹೊಸಬೆಟ್ಟು,   ಪ್ರೇಮಾನಂದ ಶೆಟ್ಟಿ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News