×
Ad

ಬಂಟ್ವಾಳ: ಗುಂಪು ಹತ್ಯೆಯ ವಿರುದ್ಧ 'ಜನತೆಯ ಅಭಿಯಾನ'

Update: 2017-08-26 17:57 IST

ಬಂಟ್ವಾಳ, ಆ. 26: ಗೋವಿನ ಹೆಸರಿನಲ್ಲಿ ದೇಶಾದ್ಯಂತ ಹೆಚ್ಚುತ್ತಿರುವ ಗುಂಪು ಹತ್ಯೆಯನ್ನು ವಿರೋಧಿಸಿ ಬಂಟ್ವಾಳ ತಾಲೂಕಿನ ವಿವಿಧೆಡೆಯ ಮುಖ್ಯ ರಸ್ತೆಗಳಲ್ಲಿ ಶುಕ್ರವಾರ ಮಧ್ಯಾಹ್ನ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು.

ತಾಲೂಕಿನ ಫರಂಗಿಪೇಟೆ, ತುಂಬೆ, ತಲಪಾಡಿ, ಕೈಕಂಬ, ಬಿ.ಸಿ.ರೋಡಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಗೂ ನಂದಾವರ, ಅಗ್ರಹಾರ, ಸಜೀಪ, ಕಲ್ಲಡ್ಕ, ವಿಟ್ಲದ ಪ್ರಮುಖ ರಸ್ತೆಗಳಲ್ಲಿ 'ಮಾನವ ಸರಪಳಿ' ನಡೆಸುವ ಮೂಲಕ ಗುಂಪು ಹತ್ಯೆಯ ವಿರುದ್ಧ ಐಕ್ಯಮತ ಪ್ರದರ್ಶಿಸಿಲಾಯಿತು.

ಜುಮಾ ನಮಾಝ್ ಬಳಿಕ ಕೈಗೆ ಕಪ್ಪು ಪಟ್ಟಿ ಹಾಗೂ 'ಮನೆಯಿಂದ ಹೊರಗೆ ಬನ್ನಿ' ಘೋಷಾವಾಕ್ಯದ ಬ್ಯಾಜ್ ಕಟ್ಟಿದ ನೂರಾರು ಮಂದಿ ರಸ್ತೆಯಲ್ಲಿ ಸುಮಾರು 15 ನಿಮಿಷ ಮಾನವ ಸರಪಳಿ ನಡೆಸಿದರು.

ಈ ಸಂದರ್ಭದಲ್ಲಿ ದೇಶದಲ್ಲಿ ನಡೆಯುತ್ತಿರುವ ಗುಂಪು ಹತ್ಯೆಯ ವಿರುದ್ಧದ ಘೋಷಣೆಗಳನ್ನೊಳಗೊಂಡ ನಾಮಫಲಕಗಳನ್ನು ಕೆಲವರು ಕುತ್ತಿಗೆಗೆ ನೇತಾಡಿಸಿಕೊಂಡಿದ್ದರು. ಅಲ್ಲದೆ ಗುಂಪು ಹತ್ಯೆಯಿಂದ ಸಾವಿಗೀಡಾದ ಜುನೈದ್, ಅಖ್ಲಾಕ್ ಮೊದಲಾದವರ ಚಿತ್ರಗಳ ಮುಖವಾಡಗಳನ್ನು ಕೆಲವರು ಧರಿಸಿದ್ದರು.

ತುಂಬೆಯಲ್ಲಿ ಮಾನವ ಸರಪಳಿ ಬಳಿಕ ಮಾತನಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬಿ.ಸಿ.ರೋಡ್ ವಲಯ ಅಧ್ಯಕ್ಷ ಎ.ಕೆ. ಇಮ್ತಿಯಾಝ್ ತುಂಬೆ, ಗೋವಿನ ಹೆಸರಿನಲ್ಲಿ ದೇಶಾದ್ಯಂತ ನಡೆಯುತ್ತಿರುವ ಗುಂಪು ಹತ್ಯೆಯನ್ನು ಪ್ರತೀಯೊಬ್ಬ ನಾಗರಿಕರು ಪ್ರತಿರೋಧಿಸಬೇಕಾಗಿದೆ. ಇದಕ್ಕಾಗಿ ಮನೆಯಿಂದ ಹೊರಗೆ ಬಂದು ಪ್ರತಿಭಟಿಸುವ ಅತ್ಯಗತ್ಯತೆ ಇದೆ ಎಂದರು.

ವರದಿಯೊಂದರ ಪ್ರಕಾರ ಇತ್ತೀಚಿನ ದಿನಗಳಲ್ಲಿ ದೇಶದ ನಾನಾ ಭಾಗದಲ್ಲಿ 38 ಅಮಾಯಕರು ಗುಂಪು ಹತ್ಯೆಯಿಂದ ಬಲಿಯಾಗಿದ್ದು ಅವುಗಳ ಪೈಕಿ 31 ಮಂದಿ ಮುಸ್ಲಿಮ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಗುಂಪಿನಿಂದ ಹತ್ಯೆಯಾದ  ಜುನೈದ್ ಎಂಬ ವಿದ್ಯಾರ್ಥಿಯ ದೇಹದಲ್ಲಿ 57 ಬಾರಿ ಚೂರಿಯಿಂದ ಚುಚ್ಚಿದ ಗುರುತುಗಳಿದ್ದವು. ಇದು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಅಕ್ರಮವಾಗಿದೆ ಎಂದು ಅವರು ಹೇಳಿದರು.

ಗುಂಪು ಹತ್ಯೆ ದೇಶಕ್ಕೆ ಅಪಾಯಕಾರಿಯಾಗಿದ್ದು ಈ ಬಗ್ಗೆ ದೇಶದ ಚಿಂತಕರು, ಬುದ್ದಿಜೀವಿಗಳು ಹಾಗೂ ಸುಪ್ರೀಂಕೋರ್ಟ್ ಮಧ್ಯೆ ಪ್ರವೇಶಿಸಬೇಕು. ಪ್ರತೀಯೊಬ್ಬರು ಮನೆಯಿಂದ ಹೊರ ಬಂದು ಗುಂಪು ಹತ್ಯೆಯ ವಿರುದ್ಧ ಪ್ರತಿಭಟಿಸಬೇಕಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ತುಂಬೆ ಸ್ವಾಗತ ಸಮಿತಿ ಅಧ್ಯಕ್ಷ ಸಾವುಞಿ ವಳವೂರು, ಉಪಾಧ್ಯಕ್ಷರಾದ ರಹೀಂ ಎ.ಕೆ.ಎಂ. ತುಂಬೆ, ರಹೀಂ ವಳವೂರು, ಕಾರ್ಯದರ್ಶಿಗಳಾದ ಹರ್ಷಾದ್ ವಳವೂರು, ಅಝೀರ್ ತುಂಬೆ, ಅಗ್ರಹಾರ್ ಸ್ವಾಗತ ಸಮಿತಿ ಅಧ್ಯಕ್ಷ ಅಬೂಬಕರ್ ಮದ್ದ, ಕಾರ್ಯದರ್ಶಿ ಇರ್ಮಾನ್, ವಿಟ್ಲ ಸ್ವಾಗತ ಸಮಿತಿ ಅಧ್ಯಕ್ಷ ಶಾಕಿರ್ ಅಳಕೆಮಜಲು, ಕಾರ್ಯದರ್ಶಿ ಅಲಿ ಕಡಂಬು, ಉಪಾಧ್ಯಕ್ಷ ಅಝೀರ್ ಕಡಂಬು, ತಲಪಾಡಿ ಸ್ವಾಗತ ಸಮಿತಿ ಅಧ್ಯಕ್ಷ ನಾಸಿರ್ ತಲಪಾಡಿ, ಕಾರ್ಯದರ್ಶಿ ಕಮರುದ್ದೀನ್ ತಲಪಾಡಿ, ಉಪಾಧ್ಯಕ್ಷ ಹಾರೀಶ್ ತಲಪಾಡಿ, ಪರ್ಲ್ಯ ಸ್ವಾಗತ ಸಮಿತಿ ಅಧ್ಯಕ್ಷ ತೌಸೀಫ್ ಕೈಕಂಬ, ಉಪಾಧ್ಯಕ್ಷ ಶಾಹುಲ್ ಎಸ್.ಪಿ., ಕಾರ್ಯದರ್ಶಿ ಅಕ್ಬರ್ ಅಲಿ, ನಂದಾವರ ಸ್ವಾಗತ ಸಮಿತಿ ಅಧ್ಯಕ್ಷ ಮುಸ್ತಫಾ ನಂದಾವರ, ಕಾರ್ಯದರ್ಶಿ ಇಸ್ಮಾಯೀಲ್ ನಂದಾವರ, ಉಪಾಧ್ಯಕ್ಷ ಉಬೈದುಲ್ಲಾ, ಕಲ್ಲಡ್ಕ ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುಲ್ ರಹ್ಮಾನ್ ಕಲ್ಲಡ್ಕ, ಕಾರ್ಯದರ್ಶಿ ಕಲೀಲ್ ಕೆ.ಸಿ.ರೋಡ್, ಉಪಾಧ್ಯಕ್ಷ ಲತೀಫ್, ಸಜಿಪ ಸ್ವಾಗತ ಸಮಿತಿ ಅಧ್ಯಕ್ಷ ಲತೀಫ್ ಸತ್ತಿಕಲ್ಲು, ಕಾರ್ಯದರ್ಶಿ ನೌರೀಶ್ ಸಜಿಪ, ಉಪಾಧ್ಯಕ್ಷ ರಶೀದ್ ಸಜಿಪ ಹಾಗೂ ಸ್ವಾಗತ ಸಮಿತಿ ಕನ್ವಿನರ್‌ಗಳು, ವಿವಿಧ ಸಂಘಟನೆ, ಪಕ್ಷಗಳ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News