ಗ್ರಾಪಂಗಳ 16 ಕೋಟಿ ರೂ. ಮರಳುಗಾರಿಕೆ ರಾಜಧನ ಬಾಕಿ
ಉಡುಪಿ, ಆ. 26: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಗ್ರಾಪಂಗಳಿಗೆ ನೀಡಬೇಕಾದ ಮರಳುಗಾರಿಕೆ ರಾಜಧನ 16 ಕೋಟಿ ರೂ. ರಾಜ್ಯದಲ್ಲಿ ಹಾಗೂ 3,73,93,000 ರೂ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆ ಯಲ್ಲಿ ಬಾಕಿ ಇರಿಸಿದ್ದು, ಈ ಬಗ್ಗೆ ಸದನದಲ್ಲಿ ಮೂರು ಬಾರಿ ಚರ್ಚಿಸಿದರೂ ಇಲಾಖೆ ಈವರೆಗೆ ಗ್ರಾಪಂಗಳಿಗೆ ನಯಾ ಪೈಸೆಯೂ ಬಿಡುಗಡೆ ಮಾಡಿಲ್ಲ. ಇದು ಗಣಿ ಮಾಫಿಯಾದಂತೆ ಗಣಿ ಇಲಾಖೆ ಮಾಫಿಯಾ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದ್ದಾರೆ.
ಉಡುಪಿ ಬಳಕೆದಾರರ ವೇದಿಕೆಯ ವತಿಯಿಂದ ಶನಿವಾರ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದಲ್ಲಿ ನಡೆದ 'ಶಾಸಕರ ಚಿತ್ತ ಗ್ರಾಹಕರತ್ತ' ನೇರ ಸಂವಾದ ಕಾರ್ಯಕ್ರಮದಲ್ಲಿ ಅವರು ಗ್ರಾಹಕರ ಪ್ರಶ್ನೆಗೆ ಉತ್ತರಿಸಿದರು.
ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಸಂಬಂಧಿಸಿದ ತಡೆಯಾಜ್ಞೆಯನ್ನು ಹಸಿರು ಪೀಠ ತೆರವುಗೊಳಿಸಿದ್ದು, ನಿಯಮಾನುಸರ ಮರಳುಗಾರಿಕೆ ನಡೆಸಲು ಪರಿಸರ ಇಲಾಖೆ ಅನುಮತಿ ನೀಡಿದೆ. ಆದರೂ ಜಿಲ್ಲಾಡಳಿತ ಇದರಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಆದುದರಿಂದ ಜಿಲ್ಲಾಡಳಿತ ಈ ಬಗ್ಗೆ ನಿಯಮ ಗಳನ್ನು ರೂಪಿಸಿ ತಕ್ಷಣವೇ ಮರಳು ಗಾರಿಕೆಗೆ ಮುಕ್ತ ಅವಕಾಶ ಮಾಡಿಕೊಡಬೇಕು. ಕಾನೂನಿನ ಚೌಕಟ್ಟಿನೊಳಗೆ ಸಮಸ್ಯೆ ಪರಿಹಾರಕ್ಕೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಅಮೃತ್ ಯೋಜನೆಯಲ್ಲಿ ಉಡುಪಿ ನಗರ ಸಭೆಗೆ ಬಿಡುಗಡೆಯಾಗಿರುವ 348 ಕೋಟಿ ರೂ. ಅನುದಾನದಲ್ಲಿ 242ಕೋಟಿ ರೂ. ವಾರಾಹಿಯಿಂದ ಉಡುಪಿ ನಗರಕ್ಕೆ ನೀರು ತರುವ ಯೋಜನೆಯನ್ನು ಸರಕಾರ ರೂಪಿಸಿದೆ. ಸರಕಾರ ಇದರ ಸಾಧಕ ಬಾಧಕಗಳನ್ನು ಜನಪ್ರತಿನಿಧಿಗಳೊಂದಿಗೆ ಚರ್ಚಿಸ ಬೇಕು ಎಂದು ಒತ್ತಾಯಿಸಿದ ಕೋಟ ಶ್ರೀನಿವಾಸ ಪೂಜಾರಿ, ಬಜೆ ಅಣೆಕಟ್ಟಿ ನಲ್ಲಿ ತುಂಬಿರುವ ಹೂಳನ್ನು ಕೂಡಲೇ ತೆಗೆಯಬೇಕು ಮತ್ತು ವಾರಾಹಿಯಿಂದ ನೀರು ತರುವ ಯೋಜನೆಯನ್ನು ಅನುಷ್ಠಾನಕ್ಕೆ ತಂದು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಸರಕಾರದ ಮೇಲೆ ಒತ್ತಡ ತರಲಾಗುವುದು ಎಂದರು.
94ಸಿ ಕಾಯಿದೆಯಡಿ ರಾಜ್ಯದಲ್ಲಿ 5,46,571 ಅರ್ಜಿ ಸ್ವೀಕೃತವಾಗಿದ್ದು, ಅದರಲ್ಲಿ 2,59,523 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 2.90ಲಕ್ಷ ಅರ್ಜಿ ವಿಲೇವಾರಿಗೆ ಬಾಕಿ ಇದೆ. ಉಡುಪಿ ಜಿಲ್ಲೆಯಲ್ಲಿ 27,500 ಅರ್ಜಿಗಳು ಸ್ವೀಕೃತಗೊಂಡಿದ್ದು, ಇದರಲ್ಲಿ ಕೇವಲ 3000 ಅರ್ಜಿಗಳು ಮಾತ್ರ ವಿಲೇವಾರಿ ಮಾಡಲಾಗಿದೆ. 94 ಸಿಸಿಯಲ್ಲಿ ರಾಜ್ಯದಲ್ಲಿ ಒಟ್ಟು 1,75,963 ಅರ್ಜಿಗಳು ಸ್ವೀಕೃತಗೊಂಡಿದ್ದು, 58,000 ವಿಲೇವಾರಿಯಾಗಿದೆ. 1,22,000 ಅರ್ಜಿಗಳು ಬಾಕಿ ಇವೆ ಎಂದು ಅವರು ಮಾಹಿತಿ ನೀಡಿದರು.
ಆರ್‌ಟಿಇ ಸೀಟು ಹಂಚಿಕೆಯಿಂದ ಕನ್ನಡ ಶಾಲೆಗಳು ಮುಚ್ಚಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯದಲ್ಲಿ ಒಟ್ಟು 1,28,648 ಆರ್‌ಟಿಇ ಸೀಟುಗಳಿದ್ದು, ಅವುಗಳಲ್ಲಿ 108729 ಸೀಟು ಹಂಚಿಕೆ ಮಾಡಲಾಗಿದೆ. ಅದೇ ರೀತಿ ಉಡುಪಿ ಜಿಲ್ಲೆಯಲ್ಲಿ 1140 ಸೀಟುಗಳಲ್ಲಿ 998 ಸೀಟು ಹಂಚಿಕೆ ಮಾಡಲಾಗಿದೆ. ಇದರಲ್ಲಿ ಖಾಸಗಿ ಶಾಲೆಗಳಲ್ಲಿ ಸೀಟು ಪಡೆದುಕೊಳ್ಳುವವರೆಲ್ಲ ಬಡವರೇ ಆಗಿದ್ದಾರೆ. ಆದ್ದರಿಂದ ಬಡವರು ಮಾತ್ರ ಸರಕಾರಿ ಶಾಲೆಗೆ ಹೋಗಬೇಕೆ ಎಂಬುದು ಮುಖ್ಯ ಪ್ರಶ್ನೆಯಾಗಿದೆ ಎಂದರು.
ನರ್ಮ್ ಬಸ್‌ಗೆ ಸಂಬಂಧಿಸಿದ ಪ್ರಶ್ನೆಗೆ, ರಾಜ್ಯದ 10 ಜಿಲ್ಲೆಗಳ 13 ನಗರ ಗಳಲ್ಲಿ 535 ನಗರ ಸಾರಿಗೆ ಬಸ್‌ಗಳು ಸಂಚರಿಸುತ್ತಿವೆ. ಉಡುಪಿ ಜಿಲ್ಲೆಯಲ್ಲಿ 30 ನರ್ಮ್ ಬಸ್‌ಗಳು ಮಂಜೂರಾಗಿದ್ದು, ಅದರಲ್ಲಿ 12 ಬಸ್‌ಗಳಿಗೆ ಪರ ವಾನಿಗೆ ದೊರೆತಿದೆ. ಜಿಲ್ಲೆಯ ನರ್ಮ್ ಬಸ್ ಗೊಂದಲಕ್ಕೆ ಸಂಬಂಧಿಸಿ ಜಿಲ್ಲಾಡಳಿತವು ಜನಪರವಾಗಿ ತೀರ್ಮಾನವನ್ನು ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ವೇದಿಕೆಯ ಸಂಚಾಲಕ ದಾಮೋದರ್ ಐತಾಳ್ ಸ್ವಾಗತಿಸಿದರು. ವಿಶ್ವಸ್ಥ ಎಚ್.ಶಾಂತರಾಜ ಐತಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾದಿರಾಜ ಆಚಾರ್ಯ ವಂದಿಸಿದರು. ಟಿ.ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.