×
Ad

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚಿನ ತಂತ್ರಜ್ಞಾನ ಬಳಕೆಗೆ ಒತ್ತು: ರಾಜ್ ಕಿರಣ್ ರೈ

Update: 2017-08-26 21:15 IST

ಮಂಗಳೂರು, ಆ. 26: ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಗೆ ಒತ್ತು ನೀಡುವ ಮೂಲಕ ಗ್ರಾಹಕರಿಗೆ ಇನ್ನಷ್ಟು ಹೆಚ್ಚಿನ ಸೌಲಭ್ಯಗಳನ್ನು ನೀಡುವ ಗುರಿ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಕ್ರಮ ಕೈಗೊಂಡಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದೇಶದ ರಾಷ್ಟ್ರೀಕೃತ ಬ್ಯಾಂಕ್‌ಗಳ ಪೈಕಿ 6ನೆ ಸ್ಥಾನದಲ್ಲಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜ್ ಕಿರಣ್ ರೈ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಅವರು ಇಂದು ನಗರಕ್ಕೆ ಆಗಮಿಸಿದ ಸಂದರ್ಭ ಬ್ಯಾಂಕಿನ ಪ್ರಗತಿ, ಮುಂದಿನ ಯೋಜನೆಗಳ ಬಗ್ಗೆ ಸುದ್ದಿಗಾರರಿಗೆ ವಿವರ ನೀಡಿದರು. 2017-18 ರಲ್ಲಿ ಬ್ಯಾಂಕ್‌ನ ಬಂಡವಾಳ 6,350 ಕೋಟಿ ರೂ. ಗಳಿಗೆ ಏರಿಕೆಯಾಗಿದೆ. ದೇಶಾದ್ಯಂತ 4,282 ಬ್ಯಾಂಕ್ ಶಾಖೆಗಳನ್ನು ಹಾಂಗ್ ಕಾಂಗ್, ದುಬೈ, ಬೆಲ್ಜಿಯಂ, ಸಿಡ್ನಿ ಸೇರಿದಂತೆ ವಿದೇಶಗಳಲ್ಲಿ 4 ಶಾಖೆಗಳನ್ನು ಮತ್ತು ಶಾಂಘೈ, ಅಬುದಾಭಿ, ಬೀಜಿಂಗ್ ನಲ್ಲಿ ಪ್ರತಿನಿಧಿ ಶಾಖೆಗಳನ್ನು ಹೊಂದಿದೆ. ಒಟ್ಟು 7,500ಕ್ಕೂ ಅಧಿಕ ಎಟಿಎಂಗಳನ್ನು ಹೊಂದಿದೆ.

ಬ್ಯಾಂಕಿನ ಆರ್ಥಿಕ ವ್ಯವಹಾರ 6,70,971 ಕೋಟಿ ರೂ. ಆಗಿದ್ದು, ಬಂಡವಾಳ 3,75,796 ಕೋಟಿ ರೂ. ಗಳಿಗೆ ಏರಿಕೆಯಾಗಿದೆ. 2018ರ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕಿನ ನಿರ್ವಾಹಣಾ ಲಾಭದಲ್ಲಿ ಶೇ 26.5 ಏರಿಕೆಯಾಗಿದೆ. ನಿವ್ವಳ ಲಾಭಗಳಿಕೆ 117 ಕೋಟಿ ರೂ. ಗಳಾಗಿದೆ ಎಂದು ರಾಜ್ ಕಿರಣ್ ರೈ ತಿಳಿಸಿದ್ದಾರೆ.

ದೇಶದಲ್ಲಿ 1919ರಲ್ಲಿ ಆರಂಭಗೊಂಡ ಬ್ಯಾಂಕ್ ಕರ್ನಾಟಕದಲ್ಲಿ 1958ರಲ್ಲಿ ಶಾಖೆಗಳನ್ನು ಆರಂಭಿಸಿದೆ. ಪ್ರಸಕ್ತ ರಾಜ್ಯದ 30 ಜಿಲ್ಲೆಗಳಲ್ಲಿ 164 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಶೇ 45ರಷ್ಟು ಶಾಖೆಗಳು ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. 2017ರ ಜೂನ್ ಅಂತ್ಯದಲ್ಲಿ ರಾಜ್ಯದಲ್ಲಿರುವ ಶಾಖೆಗಳ ಮೂಲಕ ಬ್ಯಾಂಕ್ 24,013 ಕೋಟಿ ರೂ. ಆರ್ಥಿಕ ವ್ಯವಹಾರ ನಡೆಸಿದೆ.

234 ಗ್ರಾಮಗಳಲ್ಲಿ 87,629 ಕುಟುಂಬಗಳನ್ನು ಹಾಗೂ ನಗರ ಪ್ರದೇಶದಲ್ಲಿ 103 ವಾರ್ಡ್‌ಗಳಲ್ಲಿ 46,843 ಕುಟುಂಬಗಳನ್ನು ಕೇಂದ್ರ ಸರಕಾರದ ಆರ್ಥಿಕ ಚಟುವಟಿಕೆಗಳಲ್ಲಿ ಸೇರ್ಪಡೆ ಕಾರ್ಯಕ್ರಮದನ್ವಯ ತಲುಪಲು ಸಾಧ್ಯವಾಗಿದೆ. ಕೇಂದ್ರ ಸರಕಾರದ ಆದರ್ಶ ಗ್ರಾಮ ಯೋಜನೆಯನ್ವಯ 5 ಗ್ರಾಮಗಳನ್ನು ಸಾಮಾಜಿಕ, ಆರ್ಥಿಕ ಯೋಜನೆಗಳ ಮೂಲಕ ಸಮಗ್ರ ಅಭಿವೃದ್ಧಿಗೆ ದತ್ತು ಸ್ವೀಕರಿಸಲಾಗಿದೆ. ಪ್ರಧಾನ ಮಂತ್ರಿ ಜನಧನ್ ಯೋಜನೆಯ ಮೂಲಕ 3.07 ಲಕ್ಷ ಖಾತೆ ರಾಜ್ಯದಲ್ಲಿ ಆರಂಭಿಸಲಾಗಿದೆ.

ಹೆಬ್ಬೆಟ್ಟಿನ ಗುರುತಿನಿಂದ ಎಟಿಎಂನಲ್ಲಿ ಹಣ ಡ್ರಾ

ಆಧಾರ್ ಜೋಡಣೆಯೊಂದಿಗೆ ಬ್ಯಾಂಕಿಂಗ್ ವ್ಯವಹಾರ ನಡೆಸಲು ಹೆಬ್ಬಿಟ್ಟಿನ ಗುರುತು ಪಡೆಯುವ ಕ್ರಮ ಈಗಾಗಲೇ ಜಾರಿಯಲ್ಲಿದೆ. ಮುಂದಿನ ಹಂತದಲ್ಲಿ ಆಧಾರ್ ಜೋಡಣೆಯಾಗಿರುವ ಖಾತೆದಾರರಿಗೆ ತಮ್ಮ ಖಾತೆಯ ಹಣವನ್ನು ಪಡೆಯಲು ಎಟಿಎಂ ಬಳಸದೆ ಕೇವಲ ಹೆಬ್ಬೆರಳಿನ ಗುರುತು ಮಾತ್ರ ಪಡೆಯುವ ಬಯೋಮೆಟ್ರಿಕ್ ತಂತ್ರಜ್ಞಾನವನ್ನು ಅಳವಡಿಸುವ ಚಿಂತನೆ ಇದೆ ಎಂದು ರಾಜ್ ಕಿರಣ್ ತಿಳಿಸಿದ್ದಾರೆ.

ಮಹಿಳೆಯರಿಗೆ ಕ್ಯಾನ್ಸರ್ ಚಿಕಿತ್ಸೆಗೆ ವಿಮಾ ರಕ್ಷೆ 

ಬ್ಯಾಂಕ್‌ನ ಮೂಲಕ ಮಹಿಳೆಯರಿಗೆ ಕ್ಯಾನ್ಸರ್ ಪೀಡಿತರಾದಾಗ ಚಿಕಿತ್ಸೆ ನೀಡಲು ಆರ್ಥಿಕ ಸಹಾಯವಾಗುವಂತಹ ವಿಮಾ ಯೋಜನೆಯನ್ನು ಆರಂಭಿಸಿದೆ. ಅಲ್ಲದೆ ಬಜಾಜ್ ಅಲಾಯನ್ಸ್, ಚೋಳ ಮಂಡಲಂ ಜನರಲ್ ಇನ್ಸೂರೆನ್ಸ್ ಕಂಪೆನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿವಿಧ ವಿಮಾ ಯೋಜನೆಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ ಎಂದು ರಾಜ್ ಕಿರಣ್ ರೈ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಮತ್ತು ಕರಾವಳಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ಇನ್ನಷ್ಟು ಆಸಕ್ತಿ ಮೂಡಿಸಬೇಕಾಗಿದೆ ಮತ್ತು ಮಾರ್ಗದರ್ಶನ ನೀಡಬೇಕಾಗಿದೆ. ಇದರಿಂದ ಹೆಚ್ಚಿನ ಯುವಕ-ಯುವತಿಯರು ಈ ಕ್ಷೇತ್ರದಲ್ಲಿ ತರಬೇತಿ ಪಡೆದು ಸೇರ್ಪಡೆಗೊಳ್ಳಲು ಸಾಧ್ಯವಾಗಬಹುದು ಎಂದು ರಾಜ್‌ ಕಿರಣ್ ರೈ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News