×
Ad

ಭಾರತೀಯರನ್ನು ಸೆಳೆಯಲು ಇಸ್ರೇಲ್‌ನಿಂದ ‘ಭಯೋತ್ಪಾದನಾ ವಿರೋಧಿ’ ಪ್ರವಾಸೋದ್ಯಮ

Update: 2017-08-26 22:20 IST
Picture courtesy: Facebook/Fausto Giudice

ಕೋಲ್ಕತಾ, ಆ.26: ಭಾರತೀಯ ಪ್ರವಾಸಿಗರನ್ನು ಸೆಳೆಯಲು ‘ಭಯೋತ್ಪಾದನಾ ವಿರೋಧಿ ಪ್ರವಾಸೋದ್ಯಮ’ ಅಥವಾ ರಕ್ಷಣಾ ಪ್ರವಾಸೋದ್ಯಮ ಎಂಬ ಹೊಸ ಪರಿಕಲ್ಪನೆಯನ್ನು ಇಸ್ರೇಲ್‌ನ ಪ್ರವಾಸೋದ್ಯಮ ಸಚಿವಾಲಯ ಅನ್ವೇಷಿಸಿದೆ.

ಇದೊಂದು ನೂತನ ಪರಿಕಲ್ಪನೆಯಾಗಿದೆ. ಯುದ್ದಕಲೆ ಹಾಗೂ ರಕ್ಷಣಾ ಸಾಮರ್ಥ್ಯದಲ್ಲಿ ಇಸ್ರೇಲ್‌ಗೆ ಪ್ರತಿಷ್ಠಿತ ಸ್ಥಾನವಿದೆ. ಆದ್ದರಿಂದ ಅಮೆರಿಕ ಹಾಗೂ ಯುರೋಪ್‌ನಿಂದ ಆಗಮಿಸುವ ಹಲವಾರು ಪ್ರವಾಸಿಗರು ಸ್ವರಕ್ಷಣೆಯ ವಿಧಾನ ಹಾಗೂ ಯುದ್ದಕಲೆಯ ಬಗ್ಗೆ ಆಸಕ್ತರಾಗಿದ್ದಾರೆ. ಗುಂಡು ಹಾರಿಸುವುದು, ಅಥವಾ ಶತ್ರುವಿನ ಕಣ್ಣಿಗೆ ಬೀಳದಂತೆ ಅವಿತು ಕೂರುವುದು, ಮುಖಾಮುಖಿಯಾದಾಗ ಶತ್ರುಗಳನ್ನು ನಿಭಾಯಿಸುವುದು.. ಇತ್ಯಾದಿಗಳ ಬಗ್ಗೆ ಪ್ರವಾಸಿಗರಿಗೆ ಆಸಕ್ತಿ ಇರುತ್ತದೆ. ಇದೊಂದು ‘ಪೈಂಟ್‌ಬಾಲ್’ ಆಟದಂತೆ ಒಂದು ಸಾಹಸಕ್ರೀಡೆಯಾಗಿದೆ. ಇದನ್ನು ಒಂದು ಪ್ರವಾಸೋದ್ಯಮವನ್ನಾಗಿ ರೂಪಿಸಲು ಇಸ್ರೇಲ್‌ನ ಕೆಲವು ಉದ್ಯಮಿಗಳು ಮುಂದೆ ಬಂದಿದ್ದಾರೆ ಎಂದು ಇಸ್ರೇಲ್ ಪ್ರವಾಸೋದ್ಯಮ ಇಲಾಖೆಯ ಭಾರತ ವಿಭಾಗದ ನಿರ್ದೇಶಕ ಹಸನ್ ಮದಹ್ ಹೇಳಿದ್ದಾರೆ.

ಕೆಲವು ಪ್ರವಾಸಿಗರು ವಿಶ್ರಾಂತಿ ಪಡೆಯಲು ಬಯಸುತ್ತಾರೆ. ಆದರೆ ಇನ್ನು ಕೆಲವರಿಗೆ ಇಂತಹ ಸಾಹಸ ಕ್ರೀಡೆಗಳಲ್ಲಿ ಆಸಕ್ತಿ ಇರುತ್ತದೆ. ಇಂತವರು ತಮಗಿಷ್ಟ ಬಂದ ಸಾಹಸಕ್ರೀಡೆಯಲ್ಲಿ ತೊಡಗಿಕೊಳ್ಳಬಹುದು. ಭಾರತದಲ್ಲಿರುವ ಪ್ರವಾಸಿ ಏಜೆಂಟರ ಸಹಕಾರದಿಂದ ಪ್ರವಾಸಿಗರನ್ನು ಸೆಳೆಯುವುದು ನಮ್ಮ ಉದ್ದೇಶವಾಗಿದೆ ಎಂದು ಮದಹ್ ಹೇಳುತ್ತಾರೆ.

ಭಯೋತ್ಪಾದನಾ ವಿರೋಧಿ ಪ್ರವಾಸೋದ್ಯಮದ ಪ್ರಚಾರ ಕಾರ್ಯಾರ್ಥ ಕೋಲ್ಕತಾಕ್ಕೆ ಬಂದಿದ್ದ ಇಸ್ರೇಲ್‌ನ ನಿಯೋಗವು ನಗರದಲ್ಲಿ ಆರು ‘ರೋಡ್‌ಶೋ’ ಏರ್ಪಡಿಸಿತ್ತು. ಪ್ರತೀ ನಗರದ 100ಕ್ಕೂ ಹೆಚ್ಚು ಪ್ರವಾಸಿ ಏಜೆಂಟರು ಈ ‘ರೋಡ್‌ಶೋ’ನಲ್ಲಿ ಪಾಲ್ಗೊಂಡಿದ್ದರು. ಇಸ್ರೇಲ್ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ(ಮಾರುಕಟ್ಟೆ) ಜುದ ಸ್ಯಾಮುವೆಲ್ ಹಾಗೂ ಇಸ್ರೇಲ್‌ನ ಪ್ರಮುಖ ಪ್ರವಾಸೋದ್ಯಮಿಗಳ ಪ್ರತಿನಿಧಿಗಳು ನಿಯೋಗದಲ್ಲಿದ್ದಾರೆ.

  ಈ ವರ್ಷದ 2017ರ ಜುಲೈ ವರೆಗಿನ ಅವಧಿಯಲ್ಲಿ 34,000ಕ್ಕೂ ಹೆಚ್ಚು ಭಾರತೀಯ ಪ್ರವಾಸಿಗರು ಇಸ್ರೇಲ್‌ಗೆ ಭೇಟಿ ನೀಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ.36ರಷ್ಟು ಹೆಚ್ಚಳವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News