ಆ. 28: ಕೇಂದ್ರ ಸರಕಾರ ವೈಫಲ್ಯ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ
ಪುತ್ತೂರು, ಆ. 26: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಜನವಿರೋಧಿ ನೀತಿ ಹಾಗೂ ಸುಳ್ಳು ಭರವಸೆಗಳನ್ನು ವಿರೋಧಿಸಿ ಅ.28ರಂದು ನಗರ ಕಾಂಗ್ರೆಸ್ ನೇತೃತ್ವದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ತಿಳಿಸಿದ್ದಾರೆ.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೇಂದ್ರದ ಅಚ್ಚೇದಿನ್ ಹುಡುಕಿದರೂ ಕಾಣಸಿಗುವುದಿಲ್ಲ. ಹಾಗಾದರೆ 3 ವರ್ಷಗಳ ಕಾಲ ಕೇಂದ್ರದಲ್ಲಿ ಆಡಳಿತ ನಡೆಸಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಏನು ಮಾಡಿದೆ ಎಂಬುದನ್ನು ಜನತೆಗೆ ತಿಳಿಸುವುದು ಜವಾಬ್ದಾರಿಯುತ ಪ್ರತಿಪಕ್ಷ ಕಾಂಗ್ರೆಸ್‌ನ ಕೆಲಸವಾಗಿದೆ. ರಾಷ್ಟ್ರೀಯ ಭದ್ರತೆ, ಶತ್ರು ರಾಷ್ಟ್ರಗಳ ಸವಾಲು, ಮಹಿಳೆಯರ ಸುರಕ್ಷತೆ, ಆರ್ಥಿಕ ನೀತಿ, ಅಭಿವೃದ್ಧಿ ಕಾರ್ಯಗಳಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿರುವ ಜಗನ್ನಾಥ ರೈ, ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಜಾರಿಗೆ ತಂದಿರುವ 17 ಯೋಜನೆಗಳನ್ನು ಮರುನಾಮಕರಣ ಮಾಡಿ ಬಿಜೆಪಿ ಸರಕಾರ ಅನುಷ್ಠಾನಗೊಳಿಸಿದೆ. 2 ಯೋಜನೆಗಳನ್ನು ಮಾತ್ರ ಹೊಸದಾಗಿ ಅನುಷ್ಠಾನಗೊಳಿಸಿದೆ. ಒಟ್ಟಿನಲ್ಲಿ ಜನರನ್ನು ಮರುಳುಗೊಳಿಸುವ ಕೆಲಸವನ್ನು ಕೇಂದ್ರದ ಮೋದಿ ಸರಕಾರ ಮಾಡುತ್ತಿದೆ.
ಬಡತನ ನಿರ್ಮೂಲನೆ ಮತ್ತು ರೈತರ ಸಮಸ್ಯೆಗಳಿಗೆ ಕೇಂದ್ರ ಸರಕಾರ ಸ್ಪಂದನೆ ಮಾಡಲಿಲ್ಲ. ಬಡವರ ಕುರಿತು ಮೊಸಳೆ ಕಣ್ಣಿರು ಸುರಿಸುತ್ತಿದೆ. ಅನುದಾನ ನೀಡಿಕೆಯಲ್ಲೂ ಬಿಜೆಪಿ ಮತ್ತು ಎನ್‌ಡಿಎ ಆಡಳಿತದ ರಾಜ್ಯ ಸರಕಾರಗಳಿಗೆ ಒಂದು ನೀತಿ, ಕಾಂಗ್ರೆಸ್ ಅಥವಾ ಬಿಜೆಪಿಯೇತರ ಪಕ್ಷಗಳು ಆಡಳಿತ ನಡೆಸುವ ರಾಜ್ಯಗಳಿಗೆ ಒಂದು ನೀತಿಯನ್ನು ಅನುಸರಿಸುವ ಮೂಲಕ ತಾರತಮ್ಯ ಧೋರಣೆಯನ್ನು ಅನುಸರಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಈ ಎಲ್ಲಾ ನೀತಿಗಳನ್ನು ವಿರೋಧಿಸಿ 30 ಅಂಶಗಳನ್ನು ಮುಂದಿಟ್ಟು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಎ. ಅಬ್ದುಲ್ ರಹಿಮಾನ್, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ರೋಶನ್ ಭಂಡಾರಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ಯುವ ಕಾಂಗ್ರೆಸ್‌ನ ರೋಷನ್ ರೈ ಬನ್ನೂರು ಉಪಸ್ಥಿತರಿದ್ದರು.