ಎಲ್ಲ ದೌರ್ಜನ್ಯ ಪ್ರಕರಣಗಳಿಗೂ ‘ಬಿ’ ರಿಪೋರ್ಟ್: ದಲಿತ ಮುಖಂಡರ ಅಸಮಾಧಾನ
ಬಂಟ್ವಾಳ, ಆ.27: ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಸರಿಯಾಗಿ ತನಿಖೆ ಮಾಡದೆ ಎಲ್ಲ ಪ್ರಕರಣಗಳಿಗೂ ‘ಬಿ’ ವರದಿ ಸಲ್ಲಿಸುವ ಮೂಲಕ ಪ್ರಕರಣಗಳನ್ನು ಮುಚ್ಚಿ ಹಾಕಲಾಗುತ್ತಿದೆ. ಇನ್ನು ಮುಂದೆ ನಮಗೆ ಅನ್ಯಾಯವಾದರೂ ದಲಿತ ದೌರ್ಜನ್ಯ ಕಾಯ್ದೆಯಡಿ ದೂರು ನೀಡಬಾರದು ಎಂಬ ತೀರ್ಮಾನಕ್ಕೆ ಬರುತ್ತೇವೆ ಎಂದು ದಲಿತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ರವಿವಾರ ಬಂಟ್ವಾಳ ನಗರ ಠಾಣೆಯಲ್ಲಿ ನಡೆಯಿತು.
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ, ಪಂಗಡದ ಕುಂದುಕೊರತೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ದಲಿತ ಮುಖಂಡ ರಾಜ ಪಲ್ಲಮಜಲು, ಮೊಬೈಲ್ ಕಳವು ಆರೋಪ ಹೊರಿಸಿ ಜನವರಿ ತಿಂಗಳಲ್ಲಿ ಮಣಿನಾಲ್ಕೂರು ಗ್ರಾಮದ ದಲಿತ ಬಾಲಕನೋರ್ವನ ಮೇಲೆ ತಂಡವೊಂದು ಹಲ್ಲೆ ನಡೆಸಿತ್ತು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ. ಆದರೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸಿದ್ದಾರೆ. ಹಾಗಾದರೆ ದಲಿತರಿಗೆ ನ್ಯಾಯ ಎಲ್ಲಿದೆ. ಘಟನೆಯ ಬಳಿಕ ಆ ಬಾಲಕ ನಾಚಿಕೆಯಿಂದ ಶಾಲೆಯಿಂದ ದೂರ ಉಳಿದಿದ್ದಾನೆ. ಆತನ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಿದ್ದು, ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿ ದೂರುದಾರರೊಂದಿಗೆ ಪ್ರತ್ಯೇಕವಾಗಿ ತನ್ನನ್ನು ಸಂಪರ್ಕಿಸುವಂತೆ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಸಲಹೆ ನೀಡಿ ಚರ್ಚೆಗೆ ತೆರೆ ಎಳೆದರು.
ಜಿಲ್ಲೆಯಲ್ಲಿ ನಕಲಿ ಜೋತಿಷ್ಯರು ಹೆಚ್ಚುತ್ತಿದ್ದು, ಅವರಿಂದ ಜನರು ಮೋಸ ಹೋಗುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡ ವಿಶ್ವನಾಥ್ ಚೆಂಡ್ತಿಮಾರ್ ಆಗ್ರಹಕ್ಕೆ ಉತ್ತರಿಸಿದ ಎಸ್ಪಿ, ಜೋತಿಷ್ಯರ ವಿರುದ್ಧ ನೇರ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ನಮಗೆ ಅವಕಾಶವಿಲ್ಲ. ಜೋತಿಷ್ಯರ ಬಳಿ ಹೋಗುವುದು ಜನರ ವೈಯಕ್ತಿಕ ವಿಚಾರವಾಗಿದೆ. ಜೋತಿಷ್ಯಗಳಿಂದ ಮೋಸ ಹೋಗದಂತೆ ನೋಡಿಕೊಳ್ಳುವುದು ಕೂಡಾ ಜನರ ಜವಾಬ್ದಾರಿಯಾಗಿದೆ. ಜೋತಿಷ್ಯರಿಂದ ಮೋಸ ಹೋದವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮರಳಿನ ಕೊರತೆಯಿಂದಾಗಿ ಆಶ್ರಯ ಯೋಜನೆಯಲ್ಲಿ ಮಂಜೂರಾದ ಮನೆಗಳ ಕಾಮಗಾರಿ ಸ್ಥಗಿತಗೊಂಡಿದೆ ಎಂದು ರಾಜ ಪಲ್ಲಮಜಲು ಆರೋಪಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಮುಟುಗೋಳು ಹಾಕಿರುವ 500ರಷ್ಟು ಲೋಡ್ ಮರಳು ಇಲಾಖೆಯ ಬಳಿ ಇದೆ. ಗಣಿ ಇಲಾಖೆಯ ಸಂಬಂಧಿಸಿದ ಅಧಿಕಾರಿಯಿಂದ ಪತ್ರ ತಂದರೆ ಮನೆ ನಿರ್ಮಾಣಕ್ಕೆ ಬೇಕಾದಷ್ಟು ಮರಳು ಸರಕಾರ ನಿಗದಿ ಮಾಡಿರುವ ದರದಲ್ಲಿ ನೀಡಲಾಗುವುದು ಎಂದು ಹೇಳಿದರು.
ಸುಬ್ರಹ್ಮಣ್ಯದಲ್ಲಿ ಮೃತದೇಹಗಳ ಸಾಗಾಟಕ್ಕೆ ಖಾಸಗಿ ಮತ್ತು 108 ಆ್ಯಂಬುಲೆನ್ಸ್ ಬರುದಿಲ್ಲ. ಇದರಿಂದ ಸಮಸ್ಯೆಯಾಗುತ್ತಿದ್ದು, ಇಲ್ಲಿಗೆ ಸರಕಾರಿ ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯ ದಲಿತ ಮುಖಂಡರೊಬ್ಬರು ಆಗ್ರಹಿಸಿದರು. ಬೆಳ್ಳಾರೆ ಪೊಲೀಸ್ ಠಾಣೆಗೆ ಒಂದು ವರ್ಷ ಸಂದರೂ ಮೂಲಭೂತ ಹಾಗೂ ಸಿಬ್ಬಂದಿ ಸಮಸ್ಯೆ ಕಾಡುತ್ತಿದೆ ಎಂದು ಸ್ಥಳೀಯರೊಬ್ಬರು ಗಮನಸೆಳೆದರು.
ಇಲ್ಲಿಗೆ ಶೀಘ್ರದಲ್ಲೇ ಹೊಸ ಕಟ್ಟಡ ಮಂಜೂರಾಗಲಿದ್ದು, ಖಾಲಿ ಇರುವ ಸಿಬ್ಬಂದಿ ನೇಮಕಾತಿಯೂ ನಡೆಯಲಿದೆ ಎಂದು ಎಸ್ಪಿ ಹೇಳಿದರು.
ಎಎಸ್ಪಿ ಡಾ. ಅರುಣ್ ಕುಮಾರ್, ಪುತ್ತೂರು ಡಿವೈಎಸ್ಪಿಶ್ರೀನಿವಾಸ್, ಜಿಲ್ಲೆಯ ವಿವಿಧ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್‌ಗಳು, ಎಸ್ಸೈಗಳು ಉಪಸ್ಥಿತರಿದ್ದರು.