ಅಂತಿಮ ಹಂತದಲ್ಲಿ ರಾಜ್ಯ ಕ್ರೀಡಾ ನೀತಿ: ಸಚಿವ ಪ್ರಮೋದ್
ಉಡುಪಿ, ಆ.27: ರಾಜ್ಯ ಕ್ರೀಡಾ ನೀತಿಯು ಅಂತಿಮ ಹಂತದಲ್ಲಿದ್ದು, ಇದು ಜಾರಿಯಾದರೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪೊಲೀಸ್, ಅಬಕಾರಿ, ಅರಣ್ಯ, ಕೆಎಸ್‌ಆರ್‌ಟಿಸಿ, ಅಗ್ನಿ ಶಾಮಕದಳದಂತಹ ಸಮವಸ್ತ್ರ ಧರಿಸುವ ಇಲಾಖೆಯ ಉದ್ಯೋಗದಲ್ಲಿ ಶೇ.3ರಷ್ಟು ಮೀಸಲಾತಿ ದೊರೆಯಲಿದೆ ಎಂದು ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ರವಿವಾರ ಅಜ್ಜರಕಾಡು ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಉಡುಪಿ ಜಿಲ್ಲಾ ಮಟ್ಟದ ದಸರಾ ಕ್ರೀಡಾ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
6.1ಕೋಟಿ ಜನಸಂಖ್ಯೆ ಇರುವ ಇಂಗ್ಲೆಂಡಿನ ವಾರ್ಷಿಕ ಕ್ರೀಡಾ ಬಜೆಟ್ 2288 ಕೋಟಿ ರೂ. ಆಗಿದ್ದರೆ 120 ಕೋಟಿ ಜನಸಂಖ್ಯೆಯ ಭಾರತದ ಕ್ರೀಡಾ ಬಜೆಟ್ ಕೇವಲ 900ಕೋಟಿ. ಭಾರತದಲ್ಲಿ ಕ್ರೀಡಾ ಇಲಾಖೆಗೆ ಅತ್ಯಂತ ಕಡಿಮೆ ಆದ್ಯತೆಯನ್ನು ನೀಡಲಾಗುತ್ತಿದೆ. ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಒದಗಿಸದಿದ್ದರೆ ಒಲಂಪಿಕ್ಸ್ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕ್ರೀಡಾಪಟುಗಳು ಸಾಧನೆ ಮಾಡಲು ಆಗುವುದಿಲ್ಲ ಎಂದರು.
ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಪ್ರತಿ ಕ್ರೀಡಾಪಟುಗಳಿಗೆ ನೀಡುವ ದಿನ ಭತ್ಯೆಯನ್ನು 75ರೂ.ನಿಂದ 150ರೂ.ಗೆ ಏರಿಸಲಾಗುವುದು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪಿಯುಸಿ ಹಾಗೂ ಅದಕ್ಕಿಂದ ಮೇಲ್ಪಟ್ಟ ಕಾಲೇಜು ವಿದ್ಯಾರ್ಥಿಗಳ ಕಾಲೇಜು ಶುಲ್ಕವನ್ನು ಮರುಪಾವತಿ ಮಾಡುವ ಯೋಜನೆ ಯನ್ನು ಜಾರಿಗೆ ತರಲಾಗಿದೆ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಪದಕ ವಿಜೇತರಿಗೆ ಕ್ಯಾಶ್ ಎಕ್ಸಲೆಂಟ್ ಅವಾರ್ಡ್ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಚಿವರು ಜಿಪಂ ಹಾಗೂ ಜಿಪಂ ಅಧ್ಯಕ್ಷರ ನಿಧಿಯಿಂದ ಬಿಡುಗಡೆಯಾದ ಎಂಟು ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲಾದ ಕ್ರೀಡಾಂಗಣದ ಶೌಚಾಲಯವನ್ನು ಉದ್ಘಾಟಿಸಿದರು.
ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಜಿಲ್ಲಾ ದೈಹಿಕ ಶಿಕ್ಷಣ ಪರಿ ವೀಕ್ಷಣಾಧಿಕಾರಿ ಮಧುಕರ್ ಮುಖ್ಯ ಅತಿಥಿಯಾಗಿದ್ದರು. ಉಡುಪಿ ತಾಲೂಕು ಕ್ರೀಡಾಧಿಕಾರಿ ನಾರಾಯಣ ರಾವ್, ಕಾರ್ಕಳ ಕ್ರೀಡಾಧಿಕಾರಿ ಫೆಡ್ರಿಕ್ ರೆಬೆಲ್ಲೊ, ಕುಂದಾಪುರ ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ ಉಪಸ್ಥಿತರಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.