1191 ವಿದ್ಯಾರ್ಥಿಗಳಿಗೆ 89.22ಲಕ್ಷ ವಿದ್ಯಾಪೋಷಕ್ ಸಹಾಯಧನ ವಿತರಣೆ
ಉಡುಪಿ, ಆ.27: ಪರ್ಯಾಯ ಶ್ರೀಪೇಜಾವರ ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಉಡುಪಿ ಯಕ್ಷಗಾನ ಕಲಾರಂಗ, ವಿದ್ಯಾಪೋಷಕ್ ವತಿಯಿಂದ ಉಡುಪಿ ಜಿಲ್ಲೆಯ 1191 ಪ್ರತಿಭಾವಂತ ವಿದ್ಯಾರ್ಥಿಗಳಿಗೆ 89.22ಲಕ್ಷ ರೂ. ವಿನಮ್ರ ಸಹಾಯಧನವನ್ನು ರವಿವಾರ ರಾಜಾಂಗಣದಲ್ಲಿ ವಿತರಿಸಲಾಯಿತು.
ಸಮಾರಂಭದಲ್ಲಿ ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಆಶೀವರ್ಚನ ನೀಡಿ, ವಿದ್ಯೆ ಹಾಗೂ ಕಲೆಯಿಂದ ದೇಶದ ಅಭಿವೃದ್ಧಿ ಸಾಧ್ಯ. ವಿದ್ಯೆ ಮತ್ತು ಕಲೆಯು ಸೂರ್ಯಚಂದ್ರ ಇದ್ದಂತೆ. ಯಕ್ಷಗಾನದ ಮೂಲಕ ಕಲೆ ಮತ್ತು ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುವ ಮೂಲಕ ವಿದ್ಯೆಯ ಸೇವೆ ಮಾಡುವ ಕೆಲಸವನ್ನು ಕಲಾರಂಗ ಮಾಡುತ್ತಿದೆ. ವಿದ್ಯಾರ್ಥಿಗಳ ಮೇಲೆ ಸಮಾಜದ ಋಣ ಇದೆ. ಆದುದರಿಂದ ಮಕ್ಕಳು ಸಮಾಜ ಸೇವಾ ಸಂಕಲ್ಪವನ್ನು ಬೆಳೆಸಿಕೊಳ್ಳಬೇಕು ಎಂದರು.
ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು. ಅಧ್ಯಕ್ಷತೆಯನ್ನು ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ಡಾ.ಜಿ.ಶಂಕರ್ ವಹಿಸಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸೀಮಾ ಹರೀಶ್ ರೈ, ಪ್ರವೀಣ್ ಶೆಟ್ಟಿ, ಮಂಗಳೂರು ಇನ್ಫೋಸಿಸ್ ಪ್ರೇರಣಾದ ರಾಮ್‌ಪ್ರಸಾದ್, ಯುಪಿಸಿಎಲ್‌ನ ಕಿಶೋರ್ ಆಳ್ವ, ಡಾ.ಚಂದ್ರ ಶೆಟ್ಟಿ ಕಾಪು, ತಲ್ಲೂರು ಶಿವರಾಮ ಶೆಟ್ಟಿ, ಭುವನೇಂದ್ರ ಕಿದಿ ಯೂರು, ಆನಂದ ಸಿ.ಕುಂದರ್, ಪುರುಷೋತ್ತಮ ಶೆಟ್ಟಿ, ಪುರುಷೋತ್ತಮ ಪಟೇಲ್, ಯು.ವಿಶ್ವನಾಥ್ ಶೆಣೈ, ಆನಂದ ಪಿ.ಸುವರ್ಣ, ಹರಿಯಪ್ಪ ಕೊಟ್ಯಾನ್, ರತ್ನ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಕಲಾರಂಗದ ಅಧ್ಯಕ್ಷ ಕೆ.ಗಣೇಶ್ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ಸಂದೇಶ ವಾಚಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯ ಕ್ರಮ ನಿರೂಪಿಸಿದರು.