ಗುರ್ಮಿತ್ ಸಿಂಗ್ ಶಿಕ್ಷೆಯ ಪ್ರಮಾಣ ನಾಳೆ ಪ್ರಕಟ
ಚಂಡೀಗಡ, ಆ.27: ಅತ್ಯಾಚಾರ ಪ್ರಕರಣದಲ್ಲಿ ಅಪರಾಧ ಸಾಬೀತಾಗಿರುವ ಡೇರಾ ಸಚ್ಚಾ ಸೌದದ ಮುಖ್ಯಸ್ಥ ಗುರ್ಮಿತ್ ಸಿಂಗ್‌ನ ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸಲಾಗುತ್ತದೆ.
ರೋಹ್ಟಕ್ ಜಿಲ್ಲೆಯ ಸುನರಿಯಾ ಕಾರಾಗೃಹದಲ್ಲಿ ನ್ಯಾಯಾಧೀಶರು ಶಿಕ್ಷೆಯ ಪ್ರಮಾಣವನ್ನು ಘೋಷಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಶನಿವಾರ ಹರ್ಯಾಣ ಸರಕಾರಕ್ಕೆ ಆದೇಶ ನೀಡಿತ್ತು.
ಈ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರುವ ಪೊಲೀಸರು, ಡೇರಾ ಸಚ್ಚಾ ಸೌದದ ಪ್ರಮುಖ ಕಾರ್ಯಕರ್ತರನ್ನು ಸುರಕ್ಷಿತಾ ಕ್ರಮವಾಗಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ರೋಹ್ಟಕ್ ಜಿಲ್ಲೆಯಾದ್ಯಂತ ವಿವಿಧೆಡೆ ‘ನಾಕಾಬಂಧಿ’ ವ್ಯವಸ್ಥೆಗೊಳಿಸಲಾಗಿದ್ದು ಪೊಲೀಸರು ಹಾಗೂ ಅರೆಸೇನಾ ಕಾರ್ಯಪಡೆ ಪರಿಸ್ಥಿತಿಯನ್ನು ಅತ್ಯಂತ ಎಚ್ಚರದಿಂದ ಗಮನಿಸುತ್ತಿದೆ. ಕೈಗೊಳ್ಳಲಾಗಿರುವ ಭದ್ರತಾ ವ್ಯವಸ್ಥೆಯ ಅವಲೋಕನ ನಡೆಸಿರುವ ರೋಹ್ಟಕ್ ವಿಭಾಗದ ಐಜಿ ನವದೀಪ್ ವಿರ್ಕ್, ಡೇರಾ ಕೇಂದ್ರಗಳ ಚಟುವಟಿಕೆಗಳನ್ನು ಸಂಪೂರ್ಣ ನಿಯಂತ್ರಿಸಲಾಗಿದೆ. ಅಲ್ಲದೆ ಗುರ್ಮಿತ್ ಸಿಂಗ್ ಬೆಂಬಲಿಗರನ್ನು ಒಟ್ಟುಗೂಡಿಸಬಲ್ಲ ಪ್ರಮುಖ ಕಾರ್ಯಕರ್ತರನ್ನು ಸುರಕ್ಷಿತ ಕ್ರಮವಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಮತ್ತು ಯಾವುದೇ ಪರಿಸ್ಥಿತಿ ನಿಭಾಯಿಸಲು ಪೊಲೀಸ್ ಹಾಗೂ ಅರೆಸೇನಾ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ ಎಂದು ರೋಹ್ಟಕ್ ಜಿಲ್ಲಾಧಿಕಾರಿ ಅತುಲ್ ಕುಮಾರ್ ತಿಳಿಸಿದ್ದಾರೆ. ರೋಹ್ಟಕ್ ಜಿಲ್ಲೆಗೆ ಆಗಮಿಸುವ ಎಲ್ಲಾ ವ್ಯಕ್ತಿಗಳನ್ನೂ ಹಲವೆಡೆ ತಪಾಸಣೆ ನಡೆಸುವ ವ್ಯವಸ್ಥೆ ಮಾಡಲಾಗಿದೆ. ರೋಹ್ಟಕ್‌ಗೆ ಭೇಟಿ ನೀಡಲಾಗುತ್ತಿರುವ ಬಗ್ಗೆ ಸೂಕ್ತ ಕಾರಣ ನೀಡದ ಅಥವಾ ಗುರುತು ಪತ್ರ ಹೊಂದಿರದ ವ್ಯಕ್ತಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗುತ್ತಿದೆ. ರೋಹ್ಟಕ್ ಜಿಲ್ಲೆಯ ಗಡಿಭಾಗಗಳಲ್ಲಿ ನಾಕಾಬಂಧಿ ವ್ಯವಸ್ಥೆಗೊಳಿಸಿ ನ್ಯಾಯಾಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದವರು ಹೇಳಿದ್ದಾರೆ. ರೋಹ್ಟಕ್‌ನಲ್ಲಿ ಸೆಕ್ಷನ್ 144 ಈಗಾಗಲೇ ಜಾರಿಯಲ್ಲಿದ್ದು ಐದು ಅಥವಾ ಹೆಚ್ಚಿನ ಜನರು ಒಂದೆಡೆ ಸೇರುವುದನ್ನು, ಬಂದೂಕು ಮತ್ತಿತರ ಆಯುಧಗಳನ್ನು ಹೊಂದಿರುವುದನ್ನು ನಿಷೇಧಿಸಲಾಗಿದೆ.
ಡೇರಾ ಸಚ್ಚಾ ಸೌದದ ಮುಖ್ಯಸ್ಥ ಗುರ್ಮಿತ್ ಸಿಂಗ್ ವಿರುದ್ಧ ಅತ್ಯಾಚಾರ ಪ್ರಕರಣದ ಆರೋಪ ಕೇಳಿಬಂದ ಐದು ವರ್ಷಗಳ ಬಳಿಕ, 2007ರಲ್ಲಿ ಸಿಬಿಐ ಗುರ್ಮಿತ್ ವಿರುದ್ಧ ಆರೋಪಪಟ್ಟಿ ದಾಖಲಿಸಿತ್ತು. ಈತನ ಅಪರಾಧ ಸಾಬೀತಾಗಿರುವ ಬಗ್ಗೆ 2017ರ ಆಗಸ್ಟ್ 25ರಂದು ತೀರ್ಪು ಪ್ರಕಟವಾಗಿದೆ. ತೀರ್ಪು ಹೊರಬಿದ್ದ ಕೂಡಲೇ ಈತನ ಬೆಂಬಲಿಗರು ನಡೆಸಿದ ಹಿಂಸಾಚಾರದಲ್ಲಿ 36ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು.