×
Ad

ಗೋವುಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿ ಇಬ್ಬರನ್ನು ಹೊಡೆದು ಕೊಂದ ಗೋರಕ್ಷಕರು

Update: 2017-08-27 18:15 IST

ಕಲ್ಕತ್ತಾ, ಆ.27: ಗೋ ಕಳ್ಳತನ ಮಾಡಿದ್ದಾರೆ ಎನ್ನುವ ಅನುಮಾನದಲ್ಲಿ ಇಬ್ಬರು ಯುವಕರನ್ನು ಗೋರಕ್ಷಕರ ಗುಂಪೊಂದು ಹೊಡೆದು ಕೊಂದ ಘಟನೆ ಉತ್ತರ ಬಂಗಾಳದ ಬರುಹಲಿಯಾ ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟವರಲ್ಲಿ ಒಬ್ಬ ಕೂಚ್ ಬೆಹಾರ್ ಜಿಲ್ಲೆಯವನಾಗಿದ್ದು, ಮತ್ತೊಬ್ಬ ಅಸ್ಸಾಂನ ಧುಬ್ರಿ ಜಿಲ್ಲೆಯವನಾಗಿದ್ದಾನೆ. ವಾಹನ ಚಾಲಕ ಗೋರಕ್ಷಕರಿಂದ ತಪ್ಪಿಸಿಕೊಂಡು ಧುಪ್ಗುರಿ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.

ಮೃತಪಟ್ಟವರನ್ನು ಹಫೀಝುಲ್ ಶೇಖ್ ಹಾಗೂ ಅನ್ವರ್ ಹುಸೈನ್ ಎಂದು ಗುರುತಿಸಲಾಗಿದೆ.

ಮುಂಜಾನೆ 4 ಗಂಟೆಯ ಸುಮಾರಿಗೆ ಇವರು ಟ್ರಕ್ ನಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದಾಗ ಗೋರಕ್ಷಕರು ತಡೆದಿದ್ದಾರೆ. ನಂತರ ಗೋವುಗಳನ್ನು ಟ್ರಕ್ ನಿಂದ ಕೆಳಗಿಳಿಸಿ, ಟ್ರಕ್ ಗೆ ಬೆಂಕಿ ಹಚ್ಚಿ ಇಬ್ಬರ ಮೇಲೆ ಹಲ್ಲೆ ನಡೆಸಿ ಕೊಂದಿದ್ದಾರೆ.

“ಕೊಲೆಗೈದವರನ್ನು ಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ. ಆದರೆ ಈವರೆಗೂ ಯಾರನ್ನೂ ಬಂಧಿಸಿಲ್ಲ” ಎಂದು ಜಲ್ ಪೈಗುರಿ ಜಿಲ್ಲಾ ಪೊಲೀಸ್ ಸುಪರಿಂಟೆಂಡೆಂಟ್ ಅಮಿತಾವ ಮೈತಿ ಹೇಳಿದ್ದಾರೆ.

ಉತ್ತರ ಬಂಗಾಳದಲ್ಲಿ ನಡೆಯುತ್ತಿರುವ 2ನೆ ಪ್ರಕರಣ ಇದಾಗಿದೆ. ಈ ಹಿಂದೆ ಜೂನ್ ನಲ್ಲಿ ಉತ್ತರ ದಿನಾಜ್ಪುರ್ ಜಿಲ್ಲೆಯಲ್ಲಿ ಮೂವರನ್ನು ಹೊಡೆದು ಕೊಲ್ಲಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News