ಕ್ರಿಕೆಟ್ ಆಟಗಾರ ವೆನಿಲ್ಲಾ ಮುಹಮ್ಮದ್ ಖಾಸಿಂ ನಿಧನ
ಮಣಿಪಾಲ, ಆ.27: ಸಿಂಡಿಕೇಟ್ ಬ್ಯಾಂಕ್ ಪರ್ಕಳ ಶಾಖೆಯ ಅಧಿಕಾರಿ ಮತ್ತು ಮಾಜಿ ಕ್ರಿಕೆಟ್ ಆಟಗಾರ ಆತ್ರಾಡಿಯ ವೆನಿಲ್ಲಾ ಮುಹಮ್ಮದ್ ಖಾಸಿಂ (59) ಹೃದಯ ಸಂಬಂಧಿ ಕಾಯಿಲೆುಂದ ಆ.26ರಂದು ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.
80-90ರ ದಶಕದಲ್ಲಿ ಸಿಂಡಿಕೇಟ್ ಬ್ಯಾಂಕ್ ಕ್ರಿಕೆಟ್ ತಂಡದ ಮುಖ್ಯ ಆಟಗಾರರಾಗಿ, ದಶಕಗಳ ಕಾಲವೂ ಉಡುಪಿಯ ರೋಟಕ್ ಸಿಂಡಿಕೇಟ್ ಮತ್ತು ಮುನ್ಸಿಪಲ್ ಕಪ್ ಕ್ರಿಕೆಟ್ ಪಂದ್ಯಾಟಗಳಲ್ಲಿ ಪಾರಮ್ಯವನ್ನು ಮೆರೆಯು ವಲ್ಲಿ ಆರಂಭಿಕ ಆಟದ ಬೀಸುಗೆ, ಶ್ರೇಷ್ಠ ಮಟ್ಟದ ಲೆಗ್ ಸ್ಪಿನ್ ಬೌಲಿಂಗಿನ ಪ್ರಮುಖ ಭೂಮಿಕೆಯನ್ನು ಒದಗಿಸಿದ್ದರು. ಇವರು ಬೆಂಗಳೂರಿನಲ್ಲಿಯೂ ಹಲವಾರು ಪಂದ್ಯಗಳನ್ನಾಡಿದ್ದು, ಮಣಿಪಾಲ್ ಫ್ರೆಂಡ್ಸ್ ತಂಡದ ಸದಸ್ಯನಾಗಿ ತಂಡಕ್ಕೆ ಹಲವು ಗೆಲುವುಗಳನ್ನು ತಂದುಕೊಟ್ಟಿದ್ದರು.
38 ವರ್ಷಗಳ ಕಾಲ ಸಿಂಡಿಕೇಟ್ ಬ್ಯಾಂಕಿನ ಬೆಳಗಾಂ, ಶಿರಾಲಿಕೊಪ್ಪ, ಹಿರಿ ಯಡಕ, ಭಟ್ಕಳ, ಮಣಿಪಾಲ ಮುಂತಾದ ಶಾಖೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ಇವರು 15 ದಿನಗಳ ಹಿಂದೆಯಷ್ಟೆ ಪರ್ಕಳ ಶಾಖೆಯಲ್ಲಿ ಕಾರ್ಯ ಭಾರ ವಹಿಸಿಕೊಂಡಿದ್ದರು. ಇವರು ಪತ್ನಿ, ಓರ್ವ ಪುತ್ರ, 11ಮಂದಿ ಸಹೋದರ ಸಹೋದರಿಯನ್ನು ಅಗಲಿದ್ದಾರೆ.
ಕಾಪು ಶಾಸಕ ವಿನಯ ಕುಮಾರ್ ಸೊರಕೆ, ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಂಗಳೂರು ವಲಯದ ಸಂಚಾಲಕ ಮನೋಹರ್ ಅಮೀನ್, ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಡಾ.ಕೃಷ್ಣಪ್ರಸಾದ್ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಅಂತ್ಯಕ್ರಿಯೆಯು ಆತ್ರಾಡಿ ಜುಮ್ಮಾ ಮಸೀದಿಯಲ್ಲಿ ಜರಗಿತು.