×
Ad

ವ್ಯಾಪಂ ಹಗರಣ ಬಯಲಿಗೆಳೆದ ಆಶಿಷ್ ಚತುರ್ವೇದಿಗೆ ಸಿಕ್ಕಿದ ಬಹುಮಾನವೇನು?

Update: 2017-08-27 18:30 IST

ಗ್ವಾಲಿಯರ್,ಆ.27: ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತುವವರಿಗೆ ನಮ್ಮ ದೇಶದಲ್ಲಿ ಯಾವುದೇ ಸುರಕ್ಷತೆಯಿಲ್ಲ. ಆದರೂ ತಮಗೆದುರಾಗಬಹುದಾದ ಅಪಾಯಗಳ ಬಗ್ಗೆ ಲೆಕ್ಕಿಸದೆ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತುವ ಧೀರರು ಇಂದಿಗೂ ಇದ್ದಾರೆ. ಗ್ವಾಲಿಯರ್‌ನ ನಿವಾಸಿ ಆಶಿಷ್ ಚತುರ್ವೇದಿ(27) ಅಂತಹವರಲ್ಲೊಬ್ಬರು. ಹೌದು, ಇದೇ ಆಶಿಷ್ ಚತುರ್ವೇದಿ ಇಡೀ ರಾಷ್ಟ್ರದಲ್ಲಿ ಸಂಚಲನವನ್ನು ಮೂಡಿಸಿದ ಮಧ್ಯಪ್ರದೇಶದ ‘ವ್ಯಾವಸಾಯಿಕ ಪರೀಕ್ಷಾ ಮಂಡಳಿ(ವ್ಯಾಪಂ)’ಯ ಹಗರಣವನ್ನು ಬಯಲಿಗೆಳೆದಿದ್ದರು. ಅವರು ಸೈಕಲ್‌ನ್ನು ತಳ್ಳಿಕೊಂಡು ಹೋಗುತ್ತಿರುವ ಮತ್ತು ಪೊಲೀಸ್ ಕಾನ್‌ಸ್ಟೇಬಲ್‌ನೋರ್ವ ಅವರನ್ನು ಹಿಂಬಾಲಿಸುತ್ತಿರುವ ವೀಡಿಯೊವೊಂದು ಎರಡು ವರ್ಷಗಳ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

 ವ್ಯಾಪಂ ಹಗರಣವನ್ನು ಬಯಲಿಗೆಳೆದ ತಪ್ಪಿಗೆ ಪ್ರಾಣವೊಂದನ್ನು ಬಿಟ್ಟು ಉಳಿದ ಎಲ್ಲವನ್ನೂ ಚತುರ್ವೇದಿ ಕಳೆದುಕೊಂಡಿದ್ದಾರೆ. ಈ ವಿಷಯದಲ್ಲಿ ಅವರು ನಿಜಕ್ಕೂ ಸುದೈವಿ. ವ್ಯಾಪಂ ಹಗರಣದೊಂದಿಗೆ ಗುರುತಿಸಿಕೊಂಡಿದ್ದ 36 ಜನರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಚತುರ್ವೇದಿಯವರ ಕೊಲೆಗೂ ಹಲವಾರು ಬಾರಿ ಪ್ರಯತ್ನಿಸಲಾಗಿತ್ತು.

 ಗ್ವಾಲಿಯರ್ ನಿವಾಸಿಯಾಗಿರುವ ಚತುರ್ವೇದಿ ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ರಾಜಕೀಯ ಬಲದೊಂದಿಗೆ ಹಣಬಲ ಮತ್ತು ತೋಳ್ಬಲವಿರುವ ಹಲವಾರು ಜನರನ್ನು ಎದುರು ಹಾಕಿಕೊಂಡಿದ್ದಕ್ಕೆ ತನ್ನ ಸಾಮಾಜಿಕ ಜೀವನ, ಖಾಸಗಿತನ, ಶಿಕ್ಷಣದ ಭವಿಷ್ಯ...ಹೀಗೆ ಎಲ್ಲವನ್ನೂ ಕಳೆದುಕೊಂಡು ತುಂಬ ದುಬಾರಿ ಬೆಲೆಯನ್ನು ತೆರುತ್ತಿದ್ದಾರೆ. ವ್ಯಾಪಂ ಹಗರಣದ ತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ ದೂರು ಸಲ್ಲಿಸಿದಾ ಗಿನಿಂದ ಅವರು ಸಂಕಷ್ಟಗಳ ಸರಮಾಲೆಯನ್ನೇ ಅನುಭವಿಸುತ್ತಿದ್ದಾರೆ.

ಈಗಷ್ಟೇ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ವ್ಯಾಸಂಗವನ್ನು ಮುಗಿಸಿರುವ ಚತುರ್ವೇದಿಯವರಿಗೆ ಇಂದು ಯಾರೂ ಸ್ನೇಹಿತರಿಲ್ಲ. ನೆರೆಕರೆಯವರು ಅವರೊಂದಿಗೆ ಅಥವಾ ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡುತ್ತಿಲ್ಲ. ಜನರಿಗೆ ಸೇವೆ ಸಲ್ಲಿಸಲಾ ಗದ ಅದಕ್ಷ ವೈದ್ಯರು ಮತ್ತು ಇತರ ಅಧಿಕಾರಿಗಳನ್ನು ನೇಮಕಗೊಳಿಸುವ ಮೂಲಕ ನಮ್ಮ ವ್ಯವಸ್ಥೆಯನ್ನೇ ಹಾಳುಗೆಡವಿರುವ ಭ್ರಷ್ಟರ ವಿರುದ್ಧ ನಿಂತಿದ್ದಕ್ಕಾಗಿ ಅವರು ಚತುರ್ವೇದಿಯವರಿಗೇ ಶಾಪ ಹಾಕುತ್ತಿದ್ದಾರೆ!

ಚತುರ್ವೇದಿಯವರಿಗೆ ಸರಕಾರವು 24x7ಪೊಲೀಸ್ ರಕ್ಷಣೆಯನ್ನು ನೀಡಿದೆ. ಅವರೊಂದಿಗಿರುವ ಪೊಲೀಸರು ಪ್ರತಿಯೊಂದನ್ನೂ ರೆಕಾರ್ಡ್ ಮಾಡಿಕೊಳ್ಳುತ್ತಾರೆ. ಹೌದು, ಪ್ರತಿಯೊಂದನ್ನೂ....ಅವರು ಸ್ನಾನ ಮಾಡುವುದನ್ನೂ ಈ ಪೊಲೀಸರು ರೆಕಾರ್ಡ್ ಮಾಡಿಕೊಳ್ಳುತ್ತಾರೆ!

 ‘‘ಇದು ಸರಕಾರಿ ಪ್ರಾಯೋಜಿತ ಕಿರುಕುಳವಾಗಿದೆ. ನನಗೆ ಖಾಸಗಿತನ ಎನ್ನುವುದೇ ಇಲ್ಲ. ಪ್ರತಿಯೊಂದನ್ನೂ ಅವರು ರೆಕಾರ್ಡ್ ಮಾಡಿಕೊಳ್ಳುತ್ತಾರೆ. ಆದರೆ ವಿಚಿತ್ರವೆಂದರೆ ಅವರು ತಾವು ಮಾಡಬೇಕಿರುವ ಕೆಲಸವನ್ನು ಮಾತ್ರ ಮಾಡುತ್ತಿಲ್ಲ, ಅದನ್ನು ಅವರು ನನಗೇ ಬಿಟ್ಟಿದ್ದಾರೆ. ಅದು ನನ್ನ ಭದ್ರತೆ. ಕಳೆದ ಎರಡು ವರ್ಷಗಳಲ್ಲಿ 16 ಬಾರಿ ನನ್ನ ಮೇಲೆ ದಾಳಿಗಳು ನಡೆದಿವೆ. ಪ್ರತಿ ದಾಳಿಯ ಬಳಿಕ ನಾನು ದೂರು ಸಲ್ಲಿಸಲು ಮುಂದಾದರೆ ಈ ಪೊಲೀಸರು ನನ್ನ ಮೇಲೆ ಹಲ್ಲೆ ನಡೆದಿರುವುದಕ್ಕೆ ಸಾಕ್ಷಿ ಹೇಳಲು ನಿರಾಕರಿಸಿದ್ದಾರೆ. ನನಗೆ ಯಾವ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಯಾರೇ ಆದರೂ ಸುಲಭವಾಗಿ ಊಹಿಸಬಹುದು’’ ಎನ್ನುತ್ತಾರೆ ಚತುರ್ವೇದಿ.

ದೂರವಾಣಿ ಮೂಲಕ ಅವರಿಗೆ ಬರುತ್ತಿರುವ ಬೆದರಿಕೆಗಳಿಗಂತೂ ಲೆಕ್ಕವೇ ಇಲ್ಲ. ಗೂಂಡಾಗಳೋ ರಾಜಕಾರಣಿಗಳೋ ಈ ಕರೆಗಳನ್ನು ಮಾಡುತ್ತಿಲ್ಲ. ಚತುರ್ವೇದಿ ತಮ್ಮ ಅವ್ಯವಹಾರಗಳನ್ನೆಲ್ಲ ಬಹಿರಂಗಗೊಳಿಸಿದ್ದಾರೆಂದು ಭಾವಿಸಿರುವ ಉನ್ನತ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳೇ ಈ ಕರೆಗಳನ್ನು ಮಾಡುತ್ತಿದ್ದಾರೆ!

 ವಿವಿಧ ಸರಕಾರಿ ಇಲಾಖೆಗಳಿಗೆ ಅಧಿಕಾರಿಗಳನ್ನು ವ್ಯಾಪಂ ನೇಮಕಗೊಳಿಸುತ್ತಿದ್ದು, ಈ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲಿಯೂ ಭ್ರಷ್ಟಾಚಾರ ನಡೆಯುತ್ತದೆ. ಆದರೆ ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶ ಪರೀಕ್ಷೆಯಲ್ಲಿ ನಡೆಯುವ ಭಾರೀ ಭ್ರಷ್ಟಾಚಾರ ಪ್ರಮುಖವಾಗಿದೆ.

ಚತುರ್ವೇದಿಯವರ ತಾಯಿಗೆ ಕ್ಯಾನ್ಸರ್ ಇದೆ ಎನ್ನುವುದು 2008ರಲ್ಲಿ ಗೊತ್ತಾಗಿತ್ತು ಮತ್ತು ಅವರನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿತ್ತು. ಚತುರ್ವೇದಿ ಆರೆಸ್ಸೆಸ್ ಕಾರ್ಯಕರ್ತರಾಗಿದ್ದರಿಂದ ಅವರಿಗೆ ಎಲ್ಲೆಡೆ ಸಂಪರ್ಕ ಸುಲಭವಾಗಿತ್ತು. 2011ರಲ್ಲಿ ತಾಯಿ ನಿಧನರಾಗುವವರೆಗೂ ಚತುರ್ವೇದಿಯವರ ಆಸ್ಪತ್ರೆಗಳ ಓಡಾಟ ನಡೆದೇ ಇತ್ತು. ಈ ಅವಧಿಯಲ್ಲಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿಯ ವೈದ್ಯರ ಅದಕ್ಷತೆ ಅವರ ಅರಿವಿಗೆ ಬಂದಿತ್ತು. ಎಂಬಿಬಿಎಸ್ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವುದರಿಂದ ಹಿಡಿದು ಅಂತಿಮ ಕೌನ್ಸೆಲಿಂಗ್‌ವರೆಗೂ ಅವ್ಯವಹಾರಗಳು ನಡೆಯು ತ್ತಿವೆ ಎನ್ನುವುದನ್ನು ಅವರು ಪತ್ತೆ ಹಚ್ಚಿದ್ದರು.

ಅಂದ ಹಾಗೆ ಚತುರ್ವೇದಿ ಭ್ರಷ್ಟಾಚಾರದ ವಿರುದ್ಧ ಹೋರಾಡಲೆಂದೇ ಆರೆಸ್ಸೆಸ್ ಸೇರಿದ್ದರು. ಆದರೆ ಅವರಿಗೆ ಭ್ರಮನಿರಸನವಾಗಲು ಹೆಚ್ಚು ಸಮಯ ಬೇಕಿರಲಿಲ್ಲ.

‘‘ ದೇಶದಲ್ಲಿಯ ಭ್ರಷ್ಟಾಚಾರ ಮತ್ತು ಇತರ ಪಿಡುಗುಗಳ ವಿರುದ್ಧ ಆರೆಸ್ಸೆಸ್‌ನ ಹೋರಾಟದಲ್ಲಿ ನೆರವಾಗಲೆಂದೇ 2006ರಲ್ಲಿ ನಾನು ಅದಕ್ಕೆ ಸೇರಿದ್ದೆ. ಆದರೆ ನನ್ನ ತಾಯಿಯ ಚಿಕಿತ್ಸೆಯ ಅವಧಿಯಲ್ಲಿ ಆರೆಸ್ಸೆಸ್‌ನ ಜನರೇ ಅವ್ಯಹಾರಗಳಲಿ ತೊಡಗಿದ್ದಾರೆ ಎನ್ನುವುದು ನನ್ನ ಅನುಭವಕ್ಕೆ ಬಂದಿತ್ತು ಮತ್ತು ಆಗಲೇ ಆರೆಸ್ಸೆಸ್‌ನಲ್ಲಿದ್ದ ನನ್ನ ನಂಬಿಕೆ ನುಚ್ಚುನೂರಾಗಿತ್ತು’’ಎನ್ನುತ್ತಾರೆ ಚತುರ್ವೇದಿ.

ಚತುರ್ವೇದಿ ತನಗಾಗಿ ಕಠಿಣ ಬದುಕನ್ನು ಖುದ್ದಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಹೋರಾಟವು ಸುಲಭವಾಗಿಲ್ಲ. ಆದರೆ ಭ್ರಷ್ಟಾಚಾರದ ಪಿಡುಗಿನ ವಿರುದ್ಧ ತನ್ನ ನಿರ್ಣಾಯಕ ಹೋರಾಟದಲ್ಲಿ ತನ್ನೊಂದಿಗೆ ಕೈ ಜೋಡಿಸಲು ಹಲವರಿಗೆ ಅವರು ಸ್ಫೂರ್ತಿಯನ್ನಂತೂ ನೀಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News