ಭಾರತದಲ್ಲಿ ಅಲ್ಪ ಉದ್ಯೋಗದ ಸಮಸ್ಯೆ : ನೀತಿ ಆಯೋಗ

Update: 2017-08-27 14:20 GMT

ಹೊಸದಿಲ್ಲಿ, ಆ.27: ಭಾರತವನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯೆಂದರೆ ಅಲ್ಪ ಉದ್ಯೋಗ ಅಥವಾ ಅಪೂರ್ಣ ಉದ್ಯೋಗ(ಪೂರ್ಣಕಾಲಿಕ ಉದ್ಯೋಗ ಇಲ್ಲದಿರುವುದು) ಎಂದು ನೀತಿ ಆಯೋಗ ತಿಳಿಸಿದೆ.

ಆಮದು ಬದಲಿಗೆ ಸ್ಥಳೀಯ ಮಾರುಕಟ್ಟೆಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದರೆ ಹಲವು ಸಣ್ಣಪುಟ್ಟ ಉದ್ದಿಮೆಗಳ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದು ಕಳೆದ ವಾರ ಬಿಡುಗಡೆಗೊಳಿಸಿದ ತನ್ನ ಮೂರು ವರ್ಷಗಳ ಕಾರ್ಯಯೋಜನೆಯಲ್ಲಿ ನೀತಿ ಆಯೋಗ ತಿಳಿಸಿದೆ.

ಕಳೆದ ಮೂರು ದಶಕಕ್ಕೂ ಹೆಚ್ಚಿನ ಅವಧಿಯನ್ನು ಪರಿಗಣಿಸಿದರೆ ನಿರುದ್ಯೋಗದ ಸರಾಸರಿ ಪ್ರಮಾಣ ಅತ್ಯಂತ ಕಡಿಮೆ ಎಂಬುದು ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ ನಡೆಸಿರುವ ಉದ್ಯೋಗ -ನಿರುದ್ಯೋಗ ಸಮೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಆಯೋಗದ ವರದಿಯಲ್ಲಿ ತಿಳಿಸಲಾಗಿದೆ. ಭಾರತದಲ್ಲಿ ನಿರುದ್ಯೋಗ ಸಮಸ್ಯೆಗಿಂತ ಅಲ್ಪ(ಅರೆ) ಉದ್ಯೋಗದ ಸಮಸ್ಯೆ ತೀವ್ರವಾಗಿದೆ . ಇದೀಗ ಹೆಚ್ಚು ಉತ್ಪಾದಕತೆಯ ಅಧಿಕ ಸಂಬಳದ ಉದ್ಯೋಗವನ್ನು ರೂಪಿಸಬೇಕಿದೆ ಎಂದು 2017-18ರಿಂದ 2019-20ರವರೆಗಿನ ತನ್ನ ಕಾರ್ಯಯೋಜನೆಯಲ್ಲಿ ನೀತಿ ಆಯೋಗ ತಿಳಿಸಿದೆ.

ಜಾಗತಿಕ ಮಾರುಕಟ್ಟೆಯನ್ನು ದೃಷ್ಟಿಯಲ್ಲಿರಿಸಿಕೊಂಡು ‘ಮೇಕ್ ಇನ್ ಇಂಡಿಯ’ ಅಭಿಯಾನವನ್ನು ಮುನ್ನಡೆಸಬೇಕಿದೆ ಎಂದು ಆಯೋಗವು ದಕ್ಷಿಣ ಕೊರಿಯ, ತೈವಾನ್, ಸಿಂಗಾಪುರ ಮುಂತಾದ ಪ್ರಮುಖ ಉತ್ಪಾದನಾ ದೇಶಗಳ ಉದಾಹರಣೆ ಸಹಿತ ತಿಳಿಸಿದೆ.

 ಚೀನಾದಲ್ಲಿ ಬಹುತೇಕ ವಯಸ್ಸಾದ ಕಾರ್ಮಿಕರು ಇರುವ ಕಾರಣ ಅಲ್ಲಿ ಕಾರ್ಮಿಕರ ಸಂಬಳದ ಖರ್ಚು ಹೆಚ್ಚು. ಆದ್ದರಿಂದ ಅಲ್ಲಿರುವ ಹಲವು ಕಾರ್ಮಿಕ ಕೇಂದ್ರೀಕೃತ ಉದ್ದಿಮೆಗಳು ಕಾರ್ಮಿಕರ ಸಂಬಳ ಕಡಿಮೆ ಇರುವ ದೇಶಗಳ ಹುಡುಕಾಟದಲ್ಲಿವೆ. ಭಾರತದಲ್ಲಿ ಹೇರಳ ಮಾನವಸಂಪನ್ಮೂಲ ಹಾಗೂ ಸ್ಪರ್ಧಾತ್ಮಕ ಸಂಬಳಕ್ಕೆ ದುಡಿಯಬಲ್ಲ ಕಾರ್ಮಿಕರು ಇರುವ ಕಾರಣ ಇಂತಹ ಸಂಸ್ಥೆಗಳನ್ನು ಸಹಜವಾಗಿಯೇ ಭಾರತದತ್ತ ಆಕರ್ಷಿಸಬಹುದು ಎಂದು ವರದಿ ತಿಳಿಸಿದೆ.

ಆದ್ದರಿಂದ ಉತ್ಪಾದನೆ ಮತ್ತು ರಫ್ತು ಆಧಾರಿತ ಕಾರ್ಯಯೋಜನೆ ಈಗ ಸಕಾಲಿಕವಲ್ಲ ಎಂದು ವರದಿ ತಿಳಿಸಿದೆ. ಅಲ್ಲದೆ ಬಹುರಾಷ್ಟ್ರೀಯ ಸಂಸ್ಥೆಗಳನ್ನು ಆಕರ್ಷಿಸಲು ಕರಾವಳಿ ಉದ್ಯೋಗ ವಲಯ (ಸಿಇಝೆಡ್)ಗಳನ್ನು ಸ್ಥಾಪಿಸಬೇಕು ಎಂಬ ಸಲಹೆಯನ್ನೂ ನೀಡಿದೆ. ಅಲ್ಲದೆ ಜವಳಿ ಹಾಗೂ ಉಡುಪು ಉದ್ದಿಮೆಗಳಲ್ಲಿ ಇತ್ತೀಚಿನ ದಿನದಲ್ಲಿ ನಿಗದಿತ ಅವಧಿ ಉದ್ಯೋಗ ಎಂಬ ನೂತನ ವ್ಯವಸ್ಥೆ ಜಾರಿಗೆ ಬಂದಿದ್ದು ಈ ಆಯ್ಕೆಯನ್ನು ಇತರ ಕ್ಷೇತ್ರಗಳಿಗೂ ವಿಸ್ತರಿಸಬೇಕಿದೆ ಎಂದು ಆಯೋಗದ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News