×
Ad

ದಲಿತ ದೌರ್ಜನ್ಯ ಪ್ರಕರಣಗಳ ತನಿಖೆಯಾಗುತ್ತಿಲ್ಲ : ದಲಿತ ಕುಂದು ಕೊರತೆ ಸಭೆಯಲ್ಲಿ ದಲಿತ ಮುಖಂಡರ ಅಸಮಾಧಾನ

Update: 2017-08-27 20:23 IST

ಮಂಗಳೂರು, ಆ. 27: ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ದಲಿತ ದೌರ್ಜನ್ಯ ಪ್ರಕರಣಗಳು ಸೂಕ್ತ ರೀತಿಯಲ್ಲಿ ತನಿಖೆ ನಡೆಯುತ್ತಿಲ್ಲ. 2012 ರಿಂದ ನಡೆದ ಹಲವಾರು ದಲಿತರ ಕೊಲೆ, ಹಲ್ಲೆ ಪ್ರಕರಣದ ಆರೋಪಿಗಳ ಬಂಧನ ಇನ್ನೂ ಆಗಿಲ್ಲ ಎಂದು ದಲಿತ ಮುಖಂಡ ಲಿಂಗಪ್ಪ ನಂತೂರು ವಿಷಾದ ವ್ಯಕ್ತಪಡಿಸಿದರು.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭಾನುವಾರ ನಡೆದ ದಲಿತ ಕುಂದು ಕೊರತೆ ಸಭೆಯಲ್ಲಿ ಅಹವಾಲು ಸಲ್ಲಿಸಿದ ಅವರು ದಲಿತ ದೌರ್ಜನ್ಯ ಕಾಯ್ದೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದರು.

ಪಡುಕೊಣಾಜೆ ಶಾಲೆಯಲ್ಲಿ ಅಕ್ಷರ ದಾಸೋಹ ನೌಕರರಾಗಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಇಬ್ಬರು ದಲಿತ ಮಹಿಳೆಯರನ್ನು ಅಲ್ಲಿಗೆ ಹೊಸದಾಗಿ ನೇಮಕಗೊಂಡ ಮುಖ್ಯ ಶಿಕ್ಷಕಿ ವೃಥಾ ಆರೋಪ ಹೊರಿಸಿ ಕೆಲಸದಿಂದ ವಜಾ ಮಾಡಿದ್ದಾರೆ. ಅಲ್ಲದೆ ಜಾತಿ ನಿಂದನೆ ಮಾಡಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಎರಡು ದಿನಗಳ ಬಳಿಕ ಆ ಶಿಕ್ಷಕಿಯೂ ಇವರ ಮೇಲೆ ಸುಳ್ಳು ದೂರು ನೀಡಿದ್ದಾರೆ. ಈ ಬಗ್ಗೆ ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ ನ್ಯಾಯ ದೊರಕಿಸಿ ಕೊಡಬೇಕು ಎಂದು ಲಿಂಗಪ್ಪ ನಂತೂರು ಸಭೆಯಲ್ಲಿ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಹನುಮಂತರಾಯ ದಲಿತ ದೌರ್ಜನ್ಯ ಪ್ರಕರಣಗಳನ್ನು ಎಸಿಪಿ ದರ್ಜೆಯ ಅಧಿಕಾರಿಗಳು ತನಿಖೆ ಮಾಡುತ್ತಾರೆ. ಈಗಾಗಲೇ ಹಳೆಯ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ತನಿಖಾಧಿಕಾರಿಗಳು ದೂರುದಾರರಿಗೆ ತನಿಖೆಯ ಹಂತದ ಬಗ್ಗೆ ವಿವರ ನೀಡಬೇಕೆಂದು ನಿಯಮವಿದೆ. ತನಿಖಾಧಿಕಾರಿಗಳು ಈ ಬಗ್ಗೆ ಗಮನ ವಹಿಸಬೇಕು ಎಂದರು.

ವ್ಯಕ್ತಿಯೋರ್ವ ಮಹಿಳೆಯೊಬ್ಬರಿಗೆ ಮೊಬೈಲ್‌ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿರುವುದರ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆದರೆ ಠಾಣೆಯಲ್ಲಿ ಸಮರ್ಪಕವಾಗಿ ಸ್ಪಂದನೆ ಸಿಕ್ಕಿಲ್ಲ ಎಂದು ಗಿರೀಶ್ ಕುಮಾರ್ ಎಂಬವರು ದೂರಿದರು. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಡಿಸಿಪಿ ಅವರು ಮಹಿಳಾ ಠಾಣೆ ಇನ್‌ಸ್ಪೆಕ್ಟರ್ ಕಲಾವತಿ ಅವರಿಗೆ ಸೂಚನೆ ನೀಡಿದರು.

ಬಲ್ಮಠದಲ್ಲಿ ದಲಿತ ಮಹಿಳೆಯೊಬ್ಬರ ಉದ್ಯಮಕ್ಕೆ ವ್ಯಕ್ತಿಯೋರ್ವ ತೊಂದರೆ ನೀಡುತ್ತಿರುವ ಬಗ್ಗೆ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈಬಗ್ಗೆ ಸಮರ್ಪಕವಾಗಿ ತನಿಖೆ ನಡೆದಿಲ್ಲ ಎಂದು ರಘುವೀರ್ ಸೂಟರ್‌ಪೇಟೆ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ತೊಂದರೆ ನೀಡಿದ ವ್ಯಕ್ತಿಯನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡುವಂತೆ ಕದ್ರಿ ಇನ್‌ಸ್ಪೆಕ್ಟರ್‌ಗೆ ಸೂಚಿಸಿದರು.

ಎಸಿಪಿಗಳಾದ ಉದಯ ನಾಯಕ್, ಕೆ.ರಾಮರಾವ್, ರಾಜೇಂದ್ರ ಡಿ.ಎಸ್.ಉಪಸ್ಥಿತರಿದ್ದರು. ಬಾಕ್ಸ್ ಮಾಡಿ

ಸಾಮಾಜಿಕ ಜಾಲತಾಣ ದುರ್ಬಳಕೆ

ಶಿಕ್ಷಣ ಸಂಸ್ಥೆ ಮುಖ್ಯಸ್ಥರ ಸಭೆ: ಡಿಸಿಪಿ

ಶಾಲಾ ಕಾಲೇಜುಗಳ ಮಕ್ಕಳು ಸಾಮಾಜಿಕ ಜಾಲತಾಣ ದುರ್ಬಳಕೆ ಹಾಗೂ ಮಾದಕ ದ್ರವ್ಯಗಳಿಗೆ ಬಲಿಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರದಲ್ಲೇ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಭೆ ನಡೆಸಿ ಕಾನೂನು ಮಾಹಿತಿ ನೀಡುವುದಾಗಿ ಡಿಸಿಪಿ ಹನುಮಂತರಾಯ ಹೇಳಿದರು. ಶಿಕ್ಷಣ ಸಂಸ್ಥೆಗಳಲ್ಲಿ ಹೆಣ್ಣು ಮಕ್ಕಳಿಗೆ ಯಾವುದೇ ಸಮಸ್ಯೆಯಾದಾಗ ಅವರ ಸಮಸ್ಯೆಗಳನ್ನು ಆರಿಸುವಂತಾಗಬೇಕು. ಇದಕ್ಕಾಗಿ ಪ್ರತಿ ಶಿಕ್ಷಣ ಸಂಸ್ಥೆಯಲ್ಲಿ ಸಮಿತಿಯೊಂದನ್ನು ರಚಿಸಿರಬೇಕು. ಹೆಣ್ಣು ಮಗುವಿನ ರಕ್ಷಣೆಗೆ ಸಂಸ್ಥೆಗಳು ಬದ್ಧವಾಗಿರಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News