×
Ad

ಡೋಕಲಾ ಯಥಾಸ್ಥಿತಿಗೆ ಮರಳಲಿ: ಅಮೆರಿಕ ಕರೆ

Update: 2017-08-27 21:54 IST

ವಾಶಿಂಗ್ಟನ್,ಆ.27: ಡೋಕಲಾ ಪ್ರದೇಶದಲ್ಲಿ ತಲೆದೋರಿರುವ ಸಂಘರ್ಷ ಪರಿಸ್ಥಿತಿಗೆ ಭಾರತ ಹಾಗೂ ಚೀನಾ ಮಾತುಕತೆಗಳ ಮೂಲಕ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳಲಿವೆಯೆಂಬ ಭರವಸೆಯನ್ನು ಅಮೆರಿಕ ಹೊಂದಿರುವುದಾಗಿ ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ರವಿವಾರ ತಿಳಿಸಿದ್ದಾರೆ. ಭಾರತ-ಚೀನಾ ಹಾಗೂ ಭೂತಾನ್ ಗಡಿಗಳ ಸಂಗಮಸ್ಥಳವಾದ ಡೋಕಲಾದಲ್ಲಿ ಪರಿಸ್ಥಿತಿ ಸಹಜತೆಯತ್ತೆ ಮರಳುವುದನ್ನು ಅಮೆರಿಕ ಬೆಂಬಲಿಸುವುದಾಗಿ ಅವರು ತಿಳಿಸಿದ್ದಾರೆ.

ಏಶ್ಯದ ಎರಡು ಬೃಹತ್ ರಾಷ್ಟ್ರಗಳಾದ ಭಾರತ ಹಾಗೂ ಚೀನಾಗಳ ನಡುವೆ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಭೂತಾನ್‌ನ ಸಾರ್ವಭೌಮತೆ ಹಾಗೂ ಅಂತಾರಾಷ್ಟ್ರೀಯ ಕಾನೂನುಗಳಿಗೆ ಬದ್ಧತೆಯ ಕುರಿತ ವಿಷಯಗಳ ಸಂಬಂಧಪಟ್ಟಂತೆ ಅಮೆರಿಕವು ತೀವ್ರ ಆತಂಕವನ್ನು ಹೊಂದಿದೆ ಎಂದು ಅಮೆರಿಕ ಸರಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡೋಕಲಾ ಬಿಕ್ಕಟ್ಟನ್ನು ಅಮೆರಿಕವು ನಿಕಟವಾಗಿ ಗಮನಿಸುತ್ತಿದೆ ಹಾಗೂ ಈ ವಿಷಯವಾಗಿ ನಾವು ಭಾರತ ಸರಕಾರದ ಜೊತೆ ಮಾತುಕತೆಯನ್ನು ನಡೆಸುತ್ತಿದ್ದೇವೆ. ಅವಶ್ಯಕತೆಯಿದ್ದಲ್ಲಿ ನೆರವಿಗೆ ಸಿದ್ಧವಿರುವುದಾಗಿ ಅಮೆರಿಕ ಆಡಳಿತದ ಉನ್ನತ ಅಧಿಕಾರಿ ಹೇಳಿದ್ದಾರೆ.

 ಆದಾಗ್ಯೂ ಭಾರತವು ಡೋಕಲಾ ಬಿಕ್ಕಟ್ಟಿಗೆ ಸಂಬಂಧಿಸಿ ಅಮೆರಿಕಕ್ಕೆ ಯಾವುದೇ ರೀತಿಯ ಮನವಿಯನ್ನು ಸಲ್ಲಿಸಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News