ಎನ್‌ಎಸ್‌ಜಿಗೆ ಭಾರತ ಸೇರ್ಪಡೆಗೆ ಮಾರ್ಗೋಪಾಯ ಹುಡುಕಲು ಅಮೆರಿಕ ಸಿದ್ಧ

Update: 2017-08-27 17:07 GMT

ವಾಶಿಂಗ್ಟನ್,ಆ.27: ಅಣುಶಕ್ತಿ ಪೂರೈಕೆದಾರರ ಬಳಗ (ಎನ್‌ಎಸ್‌ಜಿ)ದ ಸದಸ್ಯತ್ವವನ್ನು ಪಡೆಯುವ ಭಾರತದ ಪ್ರಯತ್ನಗಳಿಗೆ ‘‘ಇನ್ನೂ ಹೆಚ್ಚು ಕ್ರಿಯಾಶೀಲವಾಗಿ ಬೆಂಬಲವನ್ನು ನೀಡಲು’’ಅಮೆರಿಕವು ಸೂಕ್ತ ಮಾರ್ಗೋಪಾಯಗಳನ್ನು ಹುಡುಕುತ್ತಿರುವುದಾಗಿ, ಶ್ವೇತಭವನದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ಭಾರತವು ಎನ್‌ಎಸ್‌ಜಿ ಸದಸ್ಯತ್ವವನ್ನು ಪಡೆಯುವುದನ್ನು ಅಮೆರಿಕವು ಪ್ರಬಲವಾಗಿ ಬೆಂಬಲಿಸುತ್ತಿದೆ. ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೂನ್ 26ರಂದು ನಡೆಸಿದ ಮಾತುಕತೆಯ ಸಂದರ್ಭದಲ್ಲಿಯೂ ಈ ವಿಷಯವಾಗಿ ಚರ್ಚಿಸಲಾಗಿದೆಯೆಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ಸದಸ್ಯತ್ವ ಕೋರಿ ಭಾರತ ಸಲ್ಲಿಸಿದ ಅರ್ಜಿಯ ಕುರಿತು ಯಾವುದೇ ನಿರ್ಧಾರವನ್ನು ಕೈಗೊಳ್ಳಲು ಜೂನ್‌ನಲ್ಲಿ ನಡೆದ ಎನ್‌ಎಸ್‌ಜಿ ಸಭೆಯು ವಿಫಲವಾಗಿತ್ತು ಹಾಗೂ ಈ ವಿಷಯವಾಗಿ ನವೆಂಬರ್‌ನಲ್ಲಿ ಚರ್ಚಿಸಲು ನಿರ್ಧರಿಸಲಾಯಿತು.

  ಎನ್‌ಎಸ್‌ಜಿಯ ಪ್ರಮುಖ ಸದಸ್ಯನಾದ ಚೀನಾವು, ಗುಂಪಿಗೆ ಭಾರತದ ಸೇರ್ಪಡೆಯನ್ನು ವಿರೋಧಿಸುತ್ತಿದೆ. ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಭಾರತ ಸಹಿಹಾಕದಿರುವುದರಿಂದ ಅದಕ್ಕೆ ಎನ್‌ಎಸ್‌ಜಿ ಸದಸ್ಯ ನೀಡಬಾರದೆಂದು ಚೀನಾ ವಾದಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News