×
Ad

ವ್ಯಾಪಂ ಹಗರಣ ಬಯಲಿಗೆಳೆದಿದ್ದ ಚತುರ್ವೇದಿ ತಂದೆಗೆ ಕಾರು ಢಿಕ್ಕಿ

Update: 2017-08-27 23:48 IST

ಗ್ವಾಲಿಯರ್,ಆ.27: ಮಧ್ಯಪ್ರದೇಶದ ವ್ಯಾಪಂ ಹಗರಣವನ್ನು ಬಯಲಿಗೆಳೆದಿದ್ದ ಆಶಿಷ್ ಚತುರ್ವೇದಿಯವರ ತಂದೆ ಓಂ ಪ್ರಕಾಶ ಅವರಿಗೆ ಶನಿವಾರ ಕಾರೊಂದು ಢಿಕ್ಕಿ ಹೊಡೆದು ಪರಾರಿಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರು 35 ನಿಮಿಷಗಳ ಕಾಲ ರಸ್ತೆಯಲ್ಲಿ ಒದ್ದಾಡುತ್ತಿದ್ದರು. ಸ್ಥಳದಲ್ಲಿ ಪೊಲೀಸ್ ವಾಹನ ಮತ್ತು ಐವರು ಪೊಲೀಸರು ಇದ್ದರೂ ಅವರ ನೆರವಿಗೆ ಧಾವಿಸುವ ಬದಲು ಸುಮ್ಮನೆ ನೋಡುತ್ತ ನಿಂತಿದ್ದರು ಎಂದು ಚತುರ್ವೇದಿ ಆರೋಪಿಸಿದ್ದಾರೆ.

ಗ್ವಾಲಿಯರ್ ನಿವಾಸಿ ಓಂ ಪ್ರಕಾಶ ತನ್ನ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಚೇತಕ್‌ಪುರಿ ಚೌಕ್ ಬಳಿ ಕಾರೊಂದು ಢಿಕ್ಕಿ ಹೊಡೆದು ಪರಾರಿಯಾಗಿತ್ತು.

ತಂದೆಯ ಕರೆಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಚತುರ್ವೇದಿಯವರಿಗೆ ಆಘಾತ ಕಾದಿತ್ತು. ಅಲ್ಲಿದ್ದ ಪೊಲೀಸರು ಸುಮ್ಮನೆ ನೋಡುತ್ತ ನಿಂತಿದ್ದರು. ರಸ್ತೆಯಲ್ಲಿ ಬಿದ್ದಿದ್ದ ಓಂ ಪ್ರಕಾಶರ ಬಲಗೈನ ಮಣಿಗಂಟು ಮುರಿದಿತ್ತು. ತಲೆಗೇನಾದರೂ ಗಾಯವಾಗಿದ್ದರೆ ಅವರು ಬದುಕುಳಿಯುತ್ತಿರಲಿಲ್ಲ. ಚತುರ್ವೇದಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯೆ ಕೇಳಲು ಮಾಧ್ಯಮ ಪ್ರತಿನಿಧಿಗಳು ಮಾಡಿದ್ದ ಕರೆಗಳಿಗೆ ಗ್ವಾಲಿಯರ್ ಎಸ್‌ಪಿ ಆಶಿಷ್ ಉತ್ತರಿಸಿಲ್ಲ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ವಲಯ ಐಜಿ ಅನಿಲ ಕುಮಾರ್ ನಿರಾಕರಿಸಿದ್ದಾರೆ.

ನನ್ನ ತಂದೆ ಯಾವುದೇ ನೆರವು ದೊರೆಯದೇ ಸುಮಾರು 35 ನಿಮಿಷಗಳ ಕಾಲ ರಸ್ತೆಯಲ್ಲಿ ಒದ್ದಾಡುತ್ತಿದ್ದರು. ಅಲ್ಲಿದ್ದ ಪೊಲೀಸರು ಅವರನ್ನು ಯಾವುದಾದರೂ ಆಸ್ಪತ್ರೆಗೆ ಸೇರಿಸಬಹುದಾಗಿತ್ತು ಎಂದು ಚತುರ್ವೇದಿ ನೋವನ್ನು ವ್ಯಕ್ತಪಡಿಸಿದರು.

 ಅಂದ ಹಾಗೆ ಈ ಅಪಘಾತ ನಡೆದಿದ್ದು ಝಾನ್ಸಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತು ಪೊಲೀಸರು 24x7ಭದ್ರತೆ ಒದಗಿಸುವ ನೆಪದಲ್ಲಿ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಚತುರ್ವೇದಿ ಇದೇ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News