ಕಬ್ಬಿಣದ ಅದಿರು ಮಾರಾಟ ಪ್ರಕ್ರಿಯೆಯಿಂದ ಸರಕಾರಕ್ಕೆ ನಷ್ಟ : ಸುಪ್ರೀಂ ಛೀಮಾರಿ
ಹೊಸದಿಲ್ಲಿ, ಆ.28: ಈ ಹಿಂದೆ ಕಬ್ಬಿಣದ ಅದಿರು ಮಾರಾಟ ಹಾಗೂ ಖರೀದಿ ಪ್ರಕ್ರಿಯೆಯನ್ನು ಅತ್ಯಂತ ಅಪಮಾನಕರ ರೀತಿಯಲ್ಲಿ ಹಾಗೂ ಸ್ವೀಕಾರಾರ್ಹವಲ್ಲದ ರೀತಿಯಲ್ಲಿ ನಡೆಸಲಾಗಿದ್ದು , ಇದರಿಂದ ಭಾರೀ ಮೊತ್ತದ ಸರಕಾರಿ ಹಣ ಸೋರಿಕೆಯಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಕರ್ನಾಟಕದಲ್ಲಿ ಗಣಿಗಾರಿಕೆಗೆ ಇ-ಟೆಂಡರ್ ಕರೆದಿರುವ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಳ್ಳಿಹಾಕಿದ ನ್ಯಾಯಾಲಯ, ಈ ಹಿಂದಿನ ‘ಭಯಾನಕ’ ಅನುಭವ ಮರುಕಳಿಸಲು ತಾನು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದೆ.
ಗಣಿಗಾರಿಕೆ ಮೇಲಿನ ನಿರ್ಬಂಧ ತೆಗೆದುಹಾಕುವ ಹಾಗೂ ಗಣಿಗಾರಿಕೆ ಪ್ರಭಾವಿತ ವಲಯದಲ್ಲಿ ವ್ಯಾಪಕ ಪರಿಸರ ಯೋಜನೆಯ ಮೂಲಕ ಪರಿಸರ ಮತ್ತು ಜೀವಿ ಪರಿಸ್ಥಿತಿಯ ಪುನಸ್ಥಾಪನೆಯ ಬಗ್ಗೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಆದ್ದರಿಂದ, (ದಕ್ಷಿಣ) ಭಾರತೀಯ ಗಣಿಗಾರಿಕೆ ಉದ್ದಿಮೆಗಳ ಸಂಘಟನೆ ಸಲ್ಲಿಸಿರುವ ಅರ್ಜಿಯನ್ನು ಈಗ ತಳ್ಳಿಹಾಕುತ್ತಿದ್ದೇವೆ. ಅಲ್ಲದೆ ಈ ಅರ್ಜಿಗೆ ಬೆಂಬಲವಾಗಿ ವೇದಾಂತ ಸಂಸ್ಥೆ ಸಲ್ಲಿಸಿರುವ ಅರ್ಜಿಯನ್ನೂ ಪರಿಗಣಿಸುವುದಿಲ್ಲ ಎಂದು ಉಚ್ಛ ನ್ಯಾಯಾಲಯ ತಿಳಿಸಿದೆ.
ಇದೇ ಕಾರಣಕ್ಕಾಗಿ, ಕರ್ನಾಟಕ ಸರಕಾರ ಹಾಗೂ ‘ಸೆಂಟ್ರಲ್ ಎಂಪವರ್ಡ್ ಕಮಿಟಿ’ (ಸಿಇಸಿ) ಸಲ್ಲಿಸಿರುವ ಪ್ರಸ್ತಾವನೆಯನ್ನೂ ವಿಚಾರಣೆಗೆ ಪರಿಗಣಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ರಂಜನ್ ಗೊಗೋಯ್, ಪಿ.ಸಿ.ಪಂತ್ ಹಾಗೂ ನವೀನ್ ಸಿನ್ಹ ಅವರನ್ನೊಳಗೊಂಡಿರುವ ನ್ಯಾಯಾಲಯ ಪೀಠ ತಿಳಿಸಿದೆ.
ಸುಪ್ರೀಂಕೋರ್ಟ್ ನೇಮಿಸಿರುವ ಮೇಲುಸ್ತುವಾರಿ ಸಮಿತಿ ಕೈಗೊಂಡಿರುವ ಇ-ಟೆಂಡರ್ ಪ್ರಕ್ರಿಯೆಗೆ ಹೊರತಾಗಿ ಕರ್ನಾಟಕದಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರು ಗಣಿಗಾರಿಕೆ ನಡೆಸಲು ಅನುಮತಿ ನೀಡಬೇಕೆಂದು (ದಕ್ಷಿಣ) ಭಾರತೀಯ ಗಣಿಗಾರಿಕೆ ಉದ್ದಿಮೆಗಳ ಸಂಘಟನೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿಗೆ ಕರ್ನಾಟಕದಲ್ಲಿ ಗಣಿಗಾರಿಕೆ ನಡೆಸುತ್ತಿರುವ ‘ವೇದಾಂತ ಲಿಮಿಟೆಡ್ ಸಂಸ್ಥೆ ಬೆಂಬಲ ಸೂಚಿಸಿದೆ.
ಸುಪ್ರೀಂಕೋರ್ಟ್ ನೇಮಿಸಿರುವ ಮೇಲುಸ್ತುವಾರಿ ಸಮಿತಿಯ ಸ್ಥಾನದಲ್ಲಿ , ರಾಜ್ಯ ಸರಕಾರದ ಅಧಿಕಾರಿಗಳು ಒಳಗೊಂಡಿರುವ ಸಮಿತಿಯನ್ನು ಕಬ್ಬಿಣದ ಅದಿರು ಮಾರಾಟ ಮತ್ತು ಖರೀದಿ ಪ್ರಕ್ರಿಯೆಯ ಮೇಲುಸ್ತುವಾರಿ ವಹಿಸಲು ಅವಕಾಶ ಮಾಡಿಕೊಡಬೇಕೆಂಬ ರೀತಿಯಲ್ಲಿ ಕರ್ನಾಟಕ ಸರಕಾರ ಹಾಗೂ ಸಿಇಸಿ ಸಲಹೆ ನೀಡಿರುವಂತೆ ಕಾಣುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಯಾವುದೇ ವ್ಯಾಪಾರ ಪ್ರಕ್ರಿಯೆಯಲ್ಲಿ ಸಂಬಂಧಿತ ಪಕ್ಷಗಳಿಗೆ ಮುಕ್ತ ಹಾಗೂ ನ್ಯಾಯಸಮ್ಮತ ಅವಕಾಶ ಇರಬೇಕಾಗಿರುವುದು ಸಹಜವಾಗಿದೆ. ಆದರೆ ವಾಸ್ತವಿಕ ಕಾನೂನನ್ನು ಉಲ್ಲಂಘಿಸಿ ನಡೆಸುವ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಕರ್ನಾಟಕಕ್ಕೆ ಸಂಬಂಧಿಸಿದಂತೆ, ಕೋರ್ಟ್ ನೇಮಿಸಿರುವ ಮೇಲುಸ್ತುವಾರಿ ಸಮಿತಿಯ ಉಸ್ತುವಾರಿಯಲ್ಲಿ, ಇ-ಟೆಂಡರ್ ಮೂಲಕ ನಡೆಸುವ ಗಣಿಗಾರಿಕೆ ಪ್ರಕ್ರಿಯೆಯು ಗಣಿಗಾರಿಕೆಯನ್ನು ನಿಯಂತ್ರಿಸುವ, ಕ್ರಮಬದ್ಧಗೊಳಿಸುವ ಹಾಗೂ ಸಾಧ್ಯವಾದಷ್ಟು ಮಟ್ಟಿಗೆ ಪ್ರಕೃತಿ ಮತ್ತು ಪರಿಸರವನ್ನು ಈ ಹಿಂದಿನ ಪರಿಶುದ್ಧ ಸ್ಥಿತಿಯಡೆಗೆ ಮರಳಿಸುವ ಉದ್ದೇಶವನ್ನು ಹೊಂದಿದೆ ಎಂದು ನ್ಯಾಯಾಲಯ ತಿಳಿಸಿದೆ.