ಸೌಹಾರ್ದ ನೀತಿಯಡಿ ಜಿಎಸ್‌ಟಿಯಲ್ಲಿ ಮೂರು ವಿಧ ಅಳವಡಿಕೆ : ಜಿಎಸ್‌ಟಿ ಆಯುಕ್ತ ಹಿರಿಯಡಕ ರಾಜೇಶ್ ಪ್ರಸಾದ್
ಉಡುಪಿ, ಆ. 28: ರಾಜ್ಯಗಳು ತಮ್ಮ ಆರ್ಥಿಕ ಸ್ವಾತಂತ್ರವನ್ನು ಬಿಟ್ಟು ಕೊಡದ ಹಿನ್ನೆಲೆಯಲ್ಲಿ ಸೌಹಾರ್ದ ನೀತಿಯಡಿ ಕೇಂದ್ರ ಜಿಎಸ್‌ಟಿ, ರಾಜ್ಯ ಜಿಎಸ್‌ಟಿ ಹಾಗೂ ಸಮನ್ವಯದ ಸಮಗ್ರ ಜಿಎಸ್‌ಟಿ ಎಂಬ ಮೂರು ವಿಧಗಳ ತೆರಿಗೆಯನ್ನು ಅಳವಡಿಸಲಾಗಿದೆ ಎಂದು ಹೊಸದಿಲ್ಲಿಯ ಜಿಎಸ್‌ಟಿ ಆಯುಕ್ತ, ಉಡುಪಿ ಎಂಜಿಎಂ ಕಾಲೇಜಿನ ಹಳೆ ವಿದ್ಯಾರ್ಥಿ ಹಿರಿಯಡಕದ ರಾಜೇಶ್ ಪ್ರಸಾದ್ ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ಕಲಾ ಮತ್ತು ವಾಣಿಜ್ಯ ಸಂಘ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಒಂದು ರಾಷ್ಟ್ರ ಒಂದು ತೆರಿಗೆ ಕುರಿತು ಅವರು ವಿಶೇಷ ಉಪನ್ಯಾಸ ನೀಡಿ, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಪ್ರಸ್ತುತ ಜಗತ್ತಿನ 160 ದೇಶಗಳಲ್ಲಿ ಜಿಎಸ್‌ಟಿ ತೆರಿಗೆ ನೀತಿಯನ್ನು ಜಾರಿಗೆ ತರಲಾಗಿದೆ. ಭಾರತದಲ್ಲಿ ಸ್ವಾತಂತ್ರ ದೊರೆತ 70ವರ್ಷಗಳ ಬಳಿಕ ಈ ತೆರಿಗೆ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಒಟ್ಟು 17 ವಿಧದ ತೆರಿಗೆಯನ್ನು ಸೇರಿಸಿ ಜಿಎಸ್‌ಟಿಯನ್ನು ತರಲಾಗಿದೆ. ಈ ನೀತಿಯಿಂದಾಗಿ ಯಾರಿಗೂ ತೆರಿಗೆ ಪಾವತಿ ಸುವುದರಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ತೆರಿಗೆಯಲ್ಲಿ ಸಂಶಯವಿದ್ದರೆ ಗ್ರಾಹಕರು ಕೇಳಬೇಕು. ಅದು ಅವರ ಕರ್ತವ್ಯವಾಗಿದೆ ಎಂದರು.
ಸರಕಾರ ಅಭಿವೃದ್ಧಿ ಕಾರ್ಯ ಮಾಡಬೇಕಾದರೆ ಅದಕ್ಕೆ ಹಣ ಮುಖ್ಯ. ಅದನ್ನು ಸರಕಾರ ತೆರಿಗೆಯ ಮೂಲಕ ಸಂಗ್ರಹಿಸುತ್ತದೆ. ಹಾಗಾಗಿ ತೆರಿಗೆ ಇಲ್ಲದೆ ಸರಕಾರಕ್ಕೆ ಏನೂ ಮಾಡಲು ಆಗುವುದಿಲ್ಲ. ಹಿಂದೆ ಇದ್ದ ವಿವಿಧ ರೂಪಗಳ ತೆರಿಗೆಗಿಂತ ಹೆಚ್ಚಿಗೆ ಮಾಡಿಲ್ಲ. ಐಶಾರಾಮಿ ವಸ್ತುಗಳಿಗೆ ಗರಿಷ್ಠ ಶೇ.28 ತೆರಿಗೆ ವಿಧಿಸಲಾಗಿದೆ. ಈಗಾಗಲೇ ಜಿಎಸ್‌ಟಿಗೆ ಸಂಬಂಧಿಸಿದ 20 ಸಭೆಗಳಲ್ಲಿ ಭಾಗ ವಹಿಸಿದ್ದು, 21ನೆ ಸಭೆಯು ಹೈದರಾಬಾದಿನಲ್ಲಿ ಸೆ.9ರಂದು ನಡೆಯಲಿದೆ ಎಂದು ಅವರು ಹೇಳಿದರು.
ಪ್ರಕೃತಿಯು ಪ್ರಾಣಿ, ಪಕ್ಷಿಗಳಿಗೆ ನೀಡಿರುವ ವಿವಿಧ ಶಕ್ತಿಗಳಂತೆ ಮನುಷ್ಯರಿಗೆ ಚಿಂತನೆ ನಡೆಸುವ ಶಕ್ತಿಯನ್ನು ನೀಡಿದೆ. ನಾವು ಯಾವ ರೀತಿ ಯೋಚಿಸು ತ್ತೇವೆಯೋ ಆ ರೀತಿಯ ಫಲಿತಾಂಶ ನಮಗೆ ದೊರೆಯುತ್ತದೆ. ಹಾಗಾಗಿ ಸಕರಾತ್ಮಕವಾಗಿ ಯೋಜನೆ ಮಾಡಬೇಕಾಗಿದೆ. ಯಶಸ್ಸಿಗೆ ಅಡ್ಡದಾರಿ ಇಲ್ಲ. ವೈಫಲ್ಯದಿಂದಲೇ ಯಶಸ್ಸಿನ ಮೆಟ್ಟಿಲನ್ನು ಏರಲು ಸಾಧ್ಯ. ಕಠಿನ ಪರಿಶ್ರಮ, ಗುರಿ ಮುಖ್ಯ ಎಂದರು.
ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಎಲ್.ಸಾಮಗ, ನಿವೃತ್ತ ಪ್ರಾಧ್ಯಾಪಕರಾದ ದಯಾನಂದ ಶೆಟ್ಟಿ, ಶ್ರೀನಿವಾಸ ಉಪಾಧ್ಯಾಯ, ವಾಣಿಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಸುರೇಶ ರಮಣ ಮಯ್ಯ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲೆ ಕುಸುಮಾ ಕಾಮತ್ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅತಿಥಿಯನ್ನು ಪರಿಚಯಿಸಿದರು. ಉಪನ್ಯಾಸಕ ರಾಮಚಂದ್ರ ಭಟ್ ವಂದಿಸಿದರು. ವಿದ್ಯಾರ್ಥಿನಿ ರಕ್ಷಾ ಕಾರ್ಯಕ್ರಮ ನಿರೂಪಿಸಿದರು.
ಶಿಷ್ಯನಿಂದ ಗುರುಗಳ ಪ್ರಶ್ನೆಗೆ ಉತ್ತರ!
ಹಿರಿಯಡಕದಲ್ಲಿ ಹುಟ್ಟಿ, ಬೊಮ್ಮರಬೆಟ್ಟು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಹಿರಿಯಡಕ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಿಕ್ಷಣ ಪಡೆದ ರಾಜೇಶ್‌ಪ್ರಸಾದ್, 1986-89ರಲ್ಲಿ ಎಂಜಿಎಂ ಕಾಲೇಜಿ ನಲ್ಲಿ ಬಿಕಾಂ ಪದವಿ ಮುಗಿಸಿದರು. ದಿಲ್ಲಿ, ಪಾಂಡಿಚೇರಿ ವಿವಿಗಳಲ್ಲಿ ಉನ್ನತ ಶಿಕ್ಷಣ ಪಡೆದ ಇವರು, ರೈಲ್ವೆ, ಬ್ಯಾಂಕ್‌ಗಳಲ್ಲಿ ಸೇವೆ ಸಲ್ಲಿಸಿದ್ದರು. 1995ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಪಾಸಾದ ಅವರು, ದೇಶದ ಬೇರೆ ಬೇರೆ ರಾಜ್ಯ ಗಳಲ್ಲಿ ಜಿಲ್ಲಾಧಿಕಾರಿಯಾಗಿ ಹಾಗೂ ಆಯುಕ್ತರಾಗಿ ಸೇವೆ ಸಲ್ಲಿಸಿದರು.
ಇದೀಗ ಜಿಎಸ್‌ಟಿ ಆಯುಕ್ತರಾಗಿ ತಾನು ಕಲಿತ ಕಾಲೇಜಿನಲ್ಲಿ ತನಗೆ ವಿದ್ಯೆ ಕಲಿಸಿದ ಗುರುಗಳ ಸಮ್ಮುಖದಲ್ಲಿ ರಾಜೇಂದ್ರ ಪ್ರಸಾದ್ ಜಿಎಸ್‌ಟಿ ಕುರಿತ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ರಾಜೇಂದ್ರ ಪ್ರಸಾದ್‌ರ ಗುರುಗಳಾದ ಪ್ರೊ.ಎಂ.ಎಲ್.ಸಾಮಗ, ದಯಾನಂದ ಶೆಟ್ಟಿಯವರು ಜಿಎಸ್‌ಟಿ ಕುರಿತ ಸಂಶಯಗಳನ್ನು ತನ್ನ ಶಿಷ್ಯನಿಂದ ಕೇಳಿ ತಿಳಿದುಕೊಂಡರು.