×
Ad

ತರಬೇತಿ ಪಡೆದ ಚರ್ಮೋದ್ಯಮಿಗಳಿಗೆ ನಿಗಮದಲ್ಲಿ ಉದ್ಯೋಗಾವಕಾಶ : ಓ.ಶಂಕರ್

Update: 2017-08-28 23:06 IST

ಶಿವಮೊಗ್ಗ, ಆ. 28 : ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮವು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಚರ್ಮೋದ್ಯಮದ ಬೆಳವಣಿಗೆ ಮತ್ತು ಪರಿಶಿಷ್ಟ ಜಾತಿಯ ಚರ್ಮ ಕುಶಲಕರ್ಮಿಗಳಿಗೆ ದೇಶದ ಬೆಂಗಳೂರು ಮತ್ತು ಚೆನ್ನೈನಲ್ಲಿ ಹಾಗೂ ಲಂಡನ್‍ನಲ್ಲಿ ತರಬೇತಿ ನೀಡಿ, ತರಬೇತಿ ಪಡೆದವರನ್ನು ನಿಗಮದಲ್ಲಿ ಉದ್ಯೋಗಿಗಳನ್ನಾಗಿ ನೇಮಿಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಓ.ಶಂಕರ್ ಅವರು ಹೇಳಿದರು.

ಅವರು ಇಂದು ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮವು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲೆಯ ಪರಿಶಿಷ್ಟ ಜಾತಿಯ ಕುಶಲಕರ್ಮಿಗಳಿಗೆ ಕೌಶಲ್ಯಾಭಿವೃಧ್ದಿ ಮತ್ತು ಆದಾಯ ಗಳಿಕೆಗಾಗಿ ತರಬೇತಿ ಶಿಬಿರದ ಉದ್ಘಾಟನೆ ಮತ್ತು ತರಬೇತಿ ಪಡೆದ ಕುಶಲಕರ್ಮಿಗಳಿಗೆ ಸವಲತ್ತು ವಿತರಣಾ ಮತ್ತು ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ನಿಗಮವು ಪರಿಶಿಷ್ಟ ಜಾತಿಯ ಚರ್ಮೋದ್ಯಮಿಗಳ, ಚರ್ಮ ಕುಶಲಕರ್ಮಿಗಳ ಅಭ್ಯುದಯಕ್ಕಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ನಿಗಮವು ಈ ನಿಟ್ಟಿನಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ತರಬೇತಿ ಪಡೆಯಲಿಚ್ಚಿಸುವವರಿಗೆ ತರಬೇತಿ ನೀಡಿ, ಪ್ರಮಾಣಪತ್ರವನ್ನೂ ಸಹ ನೀಡುತ್ತಿದೆ ಎಂದರು.
ಈ ರೀತಿ ತರಬೇತಿ ಸ್ವಯಂ ಉದ್ಯೋಗ ಮಾಡಲಿಚ್ಚಿಸುವವರು ಲಿಡ್ಕರ್ ನೀಡುವ ಮಾದರಿಯಂತೆ ಚರ್ಮ ಉತ್ಪನ್ನಗಳನ್ನು ತಯಾರಿಸಿ, ಮಾರುಕಟ್ಟೆಗೆ ಅಲೆಯುವ ತಪ್ಪಿಸಲು ಲಿಡ್ಕರ್ ಸಂಸ್ಥೆಯ ಅಂತಹ ಉತ್ಪನ್ನಗಳನ್ನು ಮಾರಾಟಕ್ಕೆ ಪಡೆದು, ಗ್ರಾಹಕರಿಗೆ ಮಾರುತ್ತಿದೆ. ಚರ್ಮ ಉತ್ಪನ್ನಗಳ ಉತ್ಪಾದಕರಿಗೆ ಲಿಡ್ಕರ್ ಖರೀದಿಸಿದ ವಸ್ತುಗಳ ಮೊತ್ತವನ್ನು ಅಂದೇ ಅವರ ಖಾತೆಗೆ ಜಮಾ ಮಾಡಲಿದೆ ಎಂದವರು ನುಡಿದರು.

ಚರ್ಮೋದ್ಯಮಿಗಳ ಅಗತ್ಯಕ್ಕೆ ತಕ್ಕಂತೆ ನಿಗಮದ ವತಿಯಿಂದ ಚರ್ಮವನ್ನು ಪೂರೈಸಲು ಈಗಾಗಲೇ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದ ಅವರು, ಪುರುಷ ಮತ್ತು ಮಹಿಳಾ ತರಬೇತಾರ್ಥಿಗಳಿಗೆ ಉಚಿತವಾಗಿ ಹೊಲಿಗೆಯಂತ್ರ ಹಾಗೂ ಕುಟೀರಗಳನ್ನು ನೀಡಲಾಗುತ್ತಿದೆ ಎಂದರು.
ನಿಗಮವು ಕೈಗೊಳ್ಳಲಾಗಿರುವ ಚಟುವಟಿಕೆಗಳಲ್ಲದೇ ಚರ್ಮೋತ್ಪನ್ನಗಳನ್ನು ತಯಾರಿಸುವ ನಿರ್ವಸತಿಗರಿಗೆ ವಸತಿ ಹಾಗೂ ನಿವೇಶನ ನೀಡಲು ಅಗತ್ಯ ಆರ್ಥಿಕ ಸಹಕಾರ ನೀಡಲಾಗುತ್ತಿದ್ದು, ಅರ್ಹ ಫಲಾನುಭವಿಗಳು ಈ ಎಲ್ಲಾ ಯೋಜನೆಗಳ ಲಾಭ ಪಡೆದುಕೊಳ್ಳುವಂತೆ ಅವರು ಸೂಚಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರು ಮಾತನಾಡಿ, ಚರ್ಮೋದ್ಯಮಿಗಳನ್ನು ಹಾಗೂ ಅವರ ಕುಟುಂಬದ ಅವಲಂಬಿತರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ನಿಗಮದ ವತಿಯಿಂದ ಅನೇಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗಿದೆ ಎಂದರು.

ನಿಗಮದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ-ಸಿಬ್ಬಂಧಿಗಳು ಅರ್ಹ ಫಲಾನುಭವಿಗಳಿಗೆ ನಿಗಮದ ಯೋಜನೆಗಳ ಮಾಹಿತಿ ನೀಡಿ, ಯೋಜನೆಯ ಲಾಭ ಪಡೆದುಕೊಳ್ಳಲು ಅಗತ್ಯ ಮಾರ್ಗದರ್ಶನ ಹಾಗೂ ಸಕಾಲಿಕ ಸಲಹೆ ನೀಡಬೇಕೆಂದವರು ನುಡಿದರು.
ಕಾರ್ಯಕ್ರಮದಲ್ಲಿ ಸೂಡಾ ಅಧ್ಯಕ್ಷ ಇಸ್ಮಾಯಿಲ್‍ಖಾನ್, ಕಾಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ವೇದಾವಿಜಯಕುಮಾರ್, ನಿಗಮದ ನಿರ್ದೇಶಕ ಹನುಮಂತಪ್ಪ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News