ಅತ್ಯಾಚಾರ ಆರೋಪ: ನೇಪಾಳ ಮೂಲದ ಯುವಕ ಸೆರೆ
ಕೊಣಾಜೆ, ಆ. 29: ನೇಪಾಳ ಮೂಲದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ನೇಪಾಳ ಮೂಲದ ಯುವಕನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ತೊಕ್ಕೊಟ್ಟಿನಲ್ಲಿ ಫಾಸ್ಟ್‌ಫುಡ್ ಮಾಡುತ್ತಿರುವ ದೇರಳಕಟ್ಟೆಯಲ್ಲಿ ವಾಸವಾಗಿರುವ ನೇಪಾಳ ನಿವಾಸಿ ಕುಮ್ಮ ಸಿಂಗ್ (22) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆತ ಕಳೆದ ಆರು ತಿಂಗಳಿನಿಂದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ದೂರಲಾಗಿದೆ.
ದೇರಳಕಟ್ಟೆಯ ಬಾಡಿಗೆ ಮನೆಯಲ್ಲಿ ನೇಪಾಳ ಮೂಲದ ಮೂರು ಕುಟುಂಬಗಳು ವಾಸವಾಗಿದ್ದು, ಬಾಲಕಿ ತನ್ನ ತಾಯಿ ತಂದೆಯೊಂದಿಗೆ ವಾಸವಾಗಿದ್ದರೆ, ಆರೋಪಿ ಕುಮ್ಮಸಿಂಗ್ ಮತ್ತು ಆತನ ಸಹೋದರ ಇದೇ ಮನೆಯಲ್ಲಿ ವಾಸವಾಗಿದ್ದರು. ಆದರೆ ಕುಮ್ಮ ಸಿಂಗ್ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಬಾಲಕಿಯ ಮೇಲೆ ನಿರಂತರ ಅತ್ಯಾಚಾರವೆಸಗಿದ್ದು, ಬಾಲಕಿ ಬಸುರಿಯಾದ ವಿಚಾರ ತಿಳಿದು ತಲೆಮರೆಸಿಕೊಂಡಿದ್ದ. ಬಾಲಕಿಯ ಹೆತ್ತವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿದ ಕೊಣಾಜೆ ಪೊಲೀಸರು ಕೊಣಾಜೆ ಪ್ರಭಾರ ಇನ್ಸ್‌ಪೆಕ್ಟರ್ ಕೆ.ಎಂ. ಶರೀಫ್ ಅವರ ಮಾರ್ಗದರ್ಶನದಲ್ಲಿ ಎಸ್‌ಐ ಸುಕುಮಾರ್ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ.