×
Ad

ಆಧಾರ್ ಅರ್ಜಿ ವಿಚಾರಣೆಗೆ ಮುನ್ನ ಖಾಸಗಿತನ ತೀರ್ಪಿನ ಅಧ್ಯಯನ: ಸುಪ್ರೀಂ

Update: 2017-08-29 19:49 IST

ಹೊಸದಿಲ್ಲಿ,ಆ.29: ಆಧಾರ್ ಕಾನೂನಿಗೆ ತಿದ್ದುಪಡಿ ಮಸೂದೆಯನ್ನು ಹಣಕಾಸು ಮಸೂದೆಯನ್ನಾಗಿ ಪ್ರಮಾಣೀಕರಿಸಿದ್ದ ಲೋಕಸಭಾ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಜೈರಾಂ ರಮೇಶ ಅವರು ಸಲ್ಲಿಸಿರುವ ಮೇಲ್ಮನವಿಯ ಕುರಿತು ನಿರ್ಧಾರವೊಂದನ್ನು ಕೈಗೊಳ್ಳುವ ಮುನ್ನ ಖಾಸಗಿತನವು ಮೂಲಭೂತ ಹಕ್ಕು ಎಂದು ಘೋಷಿಸಿ ಒಂಭತ್ತು ನ್ಯಾಯಾಧೀಶರ ಸಂವಿಧಾನ ಪೀಠವು ನೀಡಿರುವ ನಿರ್ಣಾಯಕ ತೀರ್ಪನ್ನು ತಾನು ಅಧ್ಯಯನ ಮಾಡಬೇಕಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಹೇಳಿದೆ. ಅರ್ಜಿಯ ತ್ವರಿತ ವಿಚಾರಣೆ ನಡೆಸುವಂತೆ ರಮೇಶ ಕೋರಿದ್ದರು.

ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಲು ರಮೇಶ ನೀಡಿರುವ ಕಾರಣಗಳು ತನಗೆ ‘ಸದ್ಯಕ್ಕೆ ಮನದಟ್ಟಾಗಿಲ್ಲ’ ಎಂದು ಕಳೆದ ಫೆಬ್ರವರಿಯಲ್ಲಿ ಹೇಳಿದ್ದ ನ್ಯಾಯಾಲಯವು, ಇದು ಮಹತ್ವದ ಮತ್ತು ಗಂಭೀರ ವಿಷಯವಾಗಿದೆ ಮತ್ತು ಅವಸರದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಲು ತಾನು ಬಯಸುವುದಿಲ್ಲ ಎಂದು ತಿಳಿಸಿತ್ತು. ಕೇಂದ್ರವು ಎತ್ತಿರುವ ಎಲ್ಲ ಆಕ್ಷೇಪಗಳನ್ನು ಗಣನೆಗೆ ತೆಗೆದುಕೊಂಡು ಪ್ರಕರಣವನ್ನು ಸಿದ್ಧಗೊಳಿಸುವಂತೆ ಅದು ರಮೇಶ ಪರ ವಕೀಲರಿಗೆ ತಿಳಿಸಿತ್ತು.

ರಾಜ್ಯಸಭೆಯ ಪರಿಶೀಲನೆಗೆ ಒಳಗಾಗುವುದನ್ನು ತಪ್ಪಿಸಲು ಆಧಾರ್ ತಿದ್ದುಪಡಿ ಮಸೂದೆ,2016ನ್ನು ಹಣಕಾಸು ಮಸೂದೆ ಎಂದು ಸ್ಪೀಕರ್ ಪ್ರಮಾಣೀಕರಿಸಿದ್ದರು ಎಂದು ರಮೇಶ ಹಿಂದೆ ಪ್ರತಿಪಾದಿಸಿದ್ದರು. ಇಂತಹ ಮಸೂದೆಗಳಿಗೆ ರಾಜ್ಯಸಭೆಯು ಯಾವುದೇ ಆಕ್ಷೇಪ ವ್ಯಕ್ತಪಡಿಸಲಾಗುವುದಿಲ್ಲ.

ಕಳೆದ ವರ್ಷದ ಮಾರ್ಚ್,11ರಂದು ಲೋಕಸಭೆಯು ಮಸೂದೆಯನ್ನು ಅಂಗೀಕರಿ ಸಿತ್ತು. ಮಾರ್ಚ್ 16ರಂದು ಮಸೂದೆಯನ್ನು ಚರ್ಚಿಸಿದ್ದ ರಾಜ್ಯಸಭೆಯು ಅದಕ್ಕೆ ಹಲವಾರು ತಿದ್ದುಪಡಿಗಳನ್ನು ಸೂಚಿಸಿ ಅದೇ ದಿನ ಸಂಜೆ ಲೋಕಸಭೆಗೆ ಮರಳಿಸಿತ್ತು. ಮೇಲ್ಮನೆಯ ಎಲ್ಲ ತಿದ್ದುಪಡಿಗಳನ್ನು ತಿರಸ್ಕರಿಸಿದ್ದ ಲೋಕಸಭೆಯು ಯಾವುದೇ ಬದಲಾವಣೆಗಳಿಲ್ಲದೆ ಅದನ್ನು ಅಂಗೀಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News