ಡೇರಾ ಹಿಂಸಾಚಾರದ ನಡುವೆ ಕರ್ತವ್ಯನಿಷ್ಠೆ ಮೆರೆದ ದಿಟ್ಟೆ ಡಿಸಿ ಗೌರಿ ಪರಾಶರ್

Update: 2017-08-29 14:31 GMT

 ಸಿರ್ಸ, ಆ.29: ಆಗಸ್ಟ್ 25ರಂದು ಹರ್ಯಾಣದ ಪಂಚಕುಲದಲ್ಲಿ ನಡೆದ ಹಿಂಸಾಚಾರ ದ ಘಟನೆ ರಾಜ್ಯ ಸರಕಾರದ ಆಡಳಿತ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅತ್ಯಾಚಾರ ನಡೆಸಿದ ವ್ಯಕ್ತಿಗೆ 14 ವರ್ಷದ ಬಳಿಕ ಶಿಕ್ಷೆ ಪ್ರಕಟವಾದಾಗ ಆತನ ಬೆಂಬಲಿಗರು ಹಿಂಸಾಚಾರಕ್ಕೆ ಇಳಿದಿದ್ದು ಇವರನ್ನು ನಿಯಂತ್ರಿಸಬೇಕಿದ್ದ ರಾಜ್ಯ ಸರಕಾರ ಕೈಕಟ್ಟಿಕೊಂಡು ಸುಮ್ಮನೆ ಕುಳಿತಿತ್ತು. ಗಲಭೆಕೋರರು ವಾಹನಗಳಿಗೆ ಬೆಂಕಿ ಹಚ್ಚುತ್ತಾ, ಕಟ್ಟಡಗಳಿಗೆ ಹಾನಿ ಎಸಗುತ್ತಾ ಸಿಕ್ಕಸಿಕ್ಕವರನ್ನು ಥಳಿಸಿ, ಗುಂಡಿಕ್ಕುತ್ತಾ ಸಾಗಿದ್ದರು. 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರೆ 32ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಗಲಭೆಕೋರ ಗುಂಪಿನ ಅಟ್ಟಹಾಸಕ್ಕೆ ಕಂಗಾಲಾಗಿದ್ದ ಪೊಲೀಸರೇ ಸ್ಥಳದಿಂದ ಕಾಲ್ಕಿತ್ತಿದ್ದರು.

ಇಂತಹ ಸಂದರ್ಭದಲ್ಲಿ ಧೀರ ಯೋಧನ ರೀತಿ ನುಗ್ಗಿಬಂದು ಹಿಂಸಾನಿರತ ದುಷ್ಕರ್ಮಿಗಳನ್ನು ಎದುರಿಸಿ, ಪಂಚುಕಲದಲ್ಲಿ ಇನ್ನಷ್ಟು ಸಾವು-ನೋವು ಸಂಭವಿಸದಂತೆ ತಡೆದವರು ಜಿಲ್ಲಾಧಿಕಾರಿಯಾಗಿದ್ದ ಗೌರಿ ಪರಾಶರ್ ಜೋಷಿ. ಒಂದೆಡೆ ಪ್ರಳಯಾಂತಕರಂತೆ ನುಗ್ಗಿಬರುತ್ತಿದ್ದ ದೊಂಬಿಕೋರರನ್ನು ಕಂಡು ಕುಟುಂಬವೊಂದು 11 ತಿಂಗಳ ಶಿಶುವನ್ನು ಮಡಿಲಲ್ಲಿ ಇರಿಸಿಕೊಂಡಿದ್ದ ಯುವ ಮಹಿಳೆಯನ್ನು ಅಲ್ಲೇ ಬಿಟ್ಟು ಸ್ಥಳದಿಂದ ಪಲಾಯನ ಮಾಡಿದಾಗ ಗೌರಿ ಜೋಷಿ ಆಕೆಯ ರಕ್ಷಣೆಗೆ ಧಾವಿಸಿದ್ದರು.

ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಗೌರಿ ಜೋಷಿ, ಆ ಇಕ್ಕಟ್ಟಿನ ಪರಿಸ್ಥಿತಿಯಲ್ಲೂ ತನ್ನ ಕಚೇರಿಗೆ ತೆರಳಿ, ಪರಿಸ್ಥಿತಿಯ ನಿಯಂತ್ರಣಕ್ಕೆ ಸೇನೆಯ ಉಪಸ್ಥಿತಿ ಕೋರುವ ಮೂಲಕ ಪ್ರಸಂಗಾವಧಾನತೆ ತೋರಿದ್ದು, ಇವರು ತೆಗೆದುಕೊಂಡ ಈ ನಿರ್ಧಾರ ಈಗ ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ.

ಇಷ್ಟೇ ಅಲ್ಲ, ಬಳಿಕ ಮತ್ತೆ ಹಿಂಸಾಪೀಡಿತ ಪ್ರದೇಶದ ಮೂಲೆ ಮೂಲೆಗೂ ಸಂಚರಿಸಿ ಜನರಿಗೆ ಸಹಾಯ ಮಾಡಿದ ಗೌರಿ, ಅಂದು ಮನೆ ಮುಟ್ಟುವಾಗ ಬೆಳಿಗ್ಗಿನ ಜಾವ 3 ಗಂಟೆಯಾಗಿತ್ತು. ಮುಂಜಾನೆ ರಕ್ತಸಿಕ್ತ ಬಟ್ಟೆಯೊಂದಿಗೆ ಮನೆಗೆ ಬರಳಿದಾಗ ಮನೆಯವರು ಗಾಭರಿಗೊಂಡರು ಎನ್ನುತ್ತಾರೆ ಗೌರಿ.

 ತಾನೂ ಗಾಯಗೊಂಡಿದ್ದರೂ ಆಸ್ಪತ್ರೆಗೆ ತೆರಳಲು ಗೌರಿ ನಿರಾಕರಿಸಿದ್ದರು. ಆಸ್ಪತ್ರೆ ಈಗಾಗಲೇ ಗಾಯಾಳುಗಳಿಂದ ತುಂಬಿದೆ. ತಾನು ಚಿಕಿತ್ಸೆಗೆ ತೆರಳಿದರೆ ಅಲ್ಲಿನ ವ್ಯವಸ್ಥೆಗೆ ತೊಡಕಾಗಬಹುದು, ಇತರ ರೋಗಿಗಳಿಗೆ ತೊಂದರೆಯಾಗಬಹುದು(ಗೌರಿ ಜಿಲ್ಲಾಧಿಕಾರಿ ಆಗಿರುವ ಕಾರಣ ಇವರ ಚಿಕಿತ್ಸೆಯತ್ತ ವೈದ್ಯರು ಹೆಚ್ಚಿನ ಕಾಳಜಿ ತೋರಬಹುದು ) ಎನ್ನುವ ಕಾರಣಕ್ಕೆ ಗೌರಿ ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದ್ದರು ಎಂದು ಚಂಡೀಗಡದ ಜಿಲ್ಲಾಧಿಕಾರಿ ಅಜಿತ್ ಬಾಲಾಜಿ ಜೋಷಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News