ಭಾರತ- ಚೀನಾ ಸೇನಾಪಡೆ ಹಿಂತೆಗೆತ ನಿರ್ಧಾರಕ್ಕೆ ಭೂತಾನ್ ಸ್ವಾಗತ
ಹೊಸದಿಲ್ಲಿ, ಆ.29: ಡೋಕಾ ಲಾ ಬಿಕ್ಕಟ್ಟಿಗೆ ಪರಿಹಾರ ರೂಪಿಸುವ ಕ್ರಮವಾಗಿ ಅಲ್ಲಿರುವ ಸೇನಾಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಭಾರತ ಹಾಗೂ ಚೀನಾದ ನಿರ್ಧಾರವನ್ನು ಭೂತಾನ್ ಸ್ವಾಗತಿಸಿದೆ.
ಈ ಕ್ರಮದಿಂದ ಭಾರತ-ಚೀನಾ-ಭೂತಾನ್ ಗಡಿಗಳು ಸಂಧಿಸುವ ಡೋಕಾ ಲಾ ಪ್ರದೇಶದಲ್ಲಿ ಶಾಂತಿ ಹಾಗೂ ನೆಮ್ಮದಿ ನೆಲೆಸಲಿದೆ ಹಾಗೂ ಗಡಿಭಾಗದಲ್ಲಿ ಪೂರ್ವಸ್ಥಿತಿ ಕಾಯ್ದುಕೊಳ್ಳುವ ನಿರೀಕ್ಷೆಯಿದೆ ಎಂದು ಭೂತಾನ್‌ನ ವಿದೇಶ ವ್ಯವಹಾರ ಇಲಾಖೆ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಡೋಕಾ ಲಾದಲ್ಲಿ ಉಂಟಾಗಿರುವ ಬಿಕ್ಕಟ್ಟು ಭೂತಾನ್‌ನ ಕಳವಳಕ್ಕೆ ಕಾರಣವಾಗಿತ್ತು. ಈ ವಿವಾದಾಸ್ಪದ ಪ್ರದೇಶದ ಮೇಲೆ ಚೀನಾ ಬಲಾತ್ಕಾರವಾಗಿ ಹಕ್ಕು ಸಾಧಿಸಿದರೆ ಭೂತಾನ್‌ನ ಪಶ್ಚಿಮ ಭಾಗದ ಗಡಿಭಾಗದಲ್ಲಿ ಅಸ್ಥಿರತೆಗೆ ಕಾರಣವಾಗುತ್ತದೆ ಎಂದು ಭೂತಾನ್ ಕಳವಳಗೊಂಡಿತ್ತು. ಅಲ್ಲದೆ ಈ ಬಿಕ್ಕಟ್ಟು ದಶಕದಲ್ಲೇ ಪ್ರಪ್ರಥಮ ಬಾರಿಗೆ ಭೂತಾನ್‌ನ ಸ್ಥಾನಮಾನ ಹಾಗೂ ಭದ್ರತೆಯ ವಿಷಯದ ಬಗ್ಗೆ ಪ್ರಶ್ನೆಯನ್ನು ಮೂಡಿಸಿದೆ ಎಂದು ಭೂತಾನ್‌ನ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಡೋಕಾ ಲಾದಲ್ಲಿ ಉಭಯ ಸೇನೆಗಳೂ ಹಿಂತೆರಳಲಿದೆ ಎಂದು ಸೋಮವಾರ ಭಾರತ ಘೋಷಿಸಿ ತನ್ನ ಸೇನೆಯ ವಾಪಸಾತಿಗೆ ಕ್ರಮಗಳನ್ನು ಆರಂಭಿಸಿದ್ದರೂ, ಚೀನಾ ಮಾತ್ರ ವ್ಯತಿರಿಕ್ತ ಹೇಳಿಕೆ ನೀಡಿದೆ. ಗಡಿಭಾಗದಲ್ಲಿ ತನ್ನ ಪಡೆಗಳನ್ನು ನಿಯೋಜಿಸಲು ಸೂಕ್ತ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ಅಲ್ಲದೆ ಈ ಪ್ರದೇಶದಲ್ಲಿ ಚೀನಾ ಪಡೆ ಗಸ್ತು ತಿರುಗುವುದನ್ನು ಮುಂದುವರಿಸಲಿದೆ. ಚಾರಿತ್ರಿಕ ಗಡಿಒಪ್ಪಂದಕ್ಕೆ ಅನುಗುಣವಾಗಿ ತನ್ನ ಪ್ರಾದೇಶಿಕ ಸಾರ್ವಭೌಮತೆಯನ್ನು ಕಾಯ್ದುಕೊಳ್ಳಲು ಚೀನಾದ ಪಡೆ ಕಟಿಬದ್ಧವಾಗಿದೆ ಎಂದು ಚೀನಾ ಹೇಳಿಕೆ ನೀಡಿದೆ.
ಚೀನಾದ ಈ ಹೇಳಿಕೆ ಭೂತಾನ್‌ನ ಕಳವಳವನ್ನು ಹೆಚ್ಚಿಸಿದೆ. ಇದೀಗ ಚೀನಾದ ನಡೆಯನ್ನು ಭೂತಾನ್‌ನ ಸೇನೆ ಭಯಮಿಶ್ರಿತ ಎಚ್ಚರಿಕೆಯಿಂದ ಗಮನಿಸುತ್ತಿದೆ ಎಂದು ವರದಿ ತಿಳಿಸಿದೆ.