ಯುವ ಬರಹಗಾರರ ಚೊಚ್ಚಲ ಕೃತಿಗೆ ಪ್ರೋತ್ಸಾಹಧನ
ಉಡುಪಿ, ಆ.29: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2016ನೇ ಸಾಲಿಗೆ ಯುವ ಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನ ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿದಾರರು ಕನಿಷ್ಠ 18ರಿಂದ 35 ವರ್ಷ ವಯೋಮಿತಿಯವರಾಗಿರಬೇಕು.
ಆಸಕ್ತರು ಸ್ವ-ವಿವರವುಳ್ಳ ಮನವಿಯೊಂದಿಗೆ ದೃಢೀಕೃತ ಎಸೆಸೆಲ್ಸಿ ಅಂಕಪಟ್ಟಿಯ ಪ್ರಮಾಣಪತ್ರದ ಪ್ರತಿ ಅಥವಾ ಅಧಿಕೃತವಾದ, ದೃಢೀಕರಿಸಲ್ಪಟ್ಟ ಜನ್ಮದಾಖಲಾತಿ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸಬೇಕು. ಅಲ್ಲದೆ ಪ್ರಶಸ್ತಿಗೆ ಸಲ್ಲಿಸುವ ಕೃತಿಯು ತಮ್ಮ ಚೊಚ್ಚಲ ಕೃತಿಯಾಗಿದ್ದು, ಎಲ್ಲಿಯೂ ಪ್ರಕಟವಾಗಿಲ್ಲವೆಂಬ ಬಗ್ಗೆ ದೃಢೀಕರಣ ಪತ್ರ ನೀಡಬೇಕು.
ಆಯ್ಕೆಗಾಗಿ ಸಲ್ಲಿಸುವ ಹಸ್ತಪ್ರತಿಯು 1/8 ಡೆಮ್ಮಿ ಅಳತೆಯಲ್ಲಿ ಕನಿಷ್ಠ 60 ಪುಟಗಳಿರಬೇಕು. ಕಥೆ, ಕಾದಂಬರಿ, ಕವನ, ನಾಟಕ, ವಿಮರ್ಶಾ ಲೇಖನ, ಪ್ರಬಂಧ ಮುಂತಾದ ಕನ್ನಡ ಸಾಹಿತ್ಯದ ಪ್ರಕಾರಗಳಿಗೆ ಸಂಬಂಧಿಸಿದಂತೆ ಹಸ್ತಪ್ರತಿ ಇರಬೇಕು. ಅನುವಾದಿತ ಕೃತಿಗೆ ಅವಕಾಶವಿಲ್ಲ.
ಅರ್ಜಿಗಳನ್ನು ಸೆ.11ರೊಳಗೆ ಆಡಳಿತಾಧಿಕಾರಿ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಇವರಿಗೆ ಕಳುಹಿಸಿ ಕೊಡಬಹುದು. ಹೆಚ್ಚಿನ ಮಾಹಿತಿಗೆದೂರವಾಣಿ ಸಂಖ್ಯೆ; 080-22484516/22017704ನ್ನು ಸಂಪರ್ಕಿಸಬಹುದು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.