ವಚನಕಾರರು ಸಮಾತೆಯ ಹರಿಕಾರರು: ಡಾ.ವೆಂಕಟೇಶ್

Update: 2017-08-29 15:15 GMT

ಉಡುಪಿ, ಆ.29: ಸಮಾಜದಲ್ಲಿರುವ ಅಸಮಾನತೆಯನ್ನು ಬುಡ ಸಮೇತ ಕಿತ್ತು ಹಾಕಲು ಪ್ರಯತ್ನಿಸಿದ ವಚನಕಾರರು ಸಮಾನತೆಯ ಹರಿಕಾರರು ಎಂದು ಉಡುಪಿ ತೆಂಕನಿಡಿಯೂರು ಸರಕಾರಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಕೆ.ವೆಂಕಟೇಶ್ ಹೇಳಿದ್ದಾರೆ.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು, ಉಡುಪಿ ರಥಬೀದಿ ಗೆಳೆಯರು ಮತ್ತು ಉಡುಪಿ ತಾಲೂಕು ಶರಣ ಸಾಹಿತ್ಯ ಪರಿಷತ್‌ನ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ಆಯೋಜಿಸಲಾದ ವಚನ ದಿನಾಚರಣೆ ಕಾರ್ಯಕ್ರಮದಲ್ಲಿ ‘ವಚನ ಸಾಹಿತ್ಯ ದಲ್ಲಿರುವ ಸಮಾನತೆಯ ಆಶಯಗಳು’ ಎಂಬ ವಿಷಯದ ಕುರಿತು ವಿಚಾರ ಮಂಡಿಸಿದರು.

ಗದ್ಯವೂ ಅಲ್ಲದ ಪದ್ಯವೂ ಅಲ್ಲದ ವಚನ ಸಾಹಿತ್ಯವು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆಗಳನ್ನು ನೀಡಿದೆ. ಮಾತಿಗೆ ತಕ್ಕಂತೆ ಬದುಕು ಕಟ್ಟಿಕೊಳ್ಳಬೇಕೆಂಬ ಆಶಯವನ್ನು ವಚನಕಾರರು ಹೊಂದಿದ್ದರು. ವಚನದಲ್ಲಿದ್ದ ಅಹಿಂಸ ತತ್ವವನ್ನು ಸಾಕಷ್ಟು ಮಹಾತ್ಮರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು ಎಂದರು.

ಶರಣರಲ್ಲಿ ಯಾವುದೇ ಜಾತಿಭೇದ ಎಂಬುದಿಲ್ಲ. ಜಾತಿ ಬೇಧ ಮಾಡಿದ ವರು ಶರಣರು ಆಗಲು ಸಾಧ್ಯವಿಲ್ಲ. ಸಮಾಜದಲ್ಲಿರುವ ವರ್ಣಾಶ್ರಮ ವ್ಯವಸ್ಥೆ ಯನ್ನು ಶರಣರು ವಿರೋಧಿಸಿದ್ದರು. ವ್ಯಕ್ತಿಯನ್ನು ಜಾತಿ ಆಧಾರಿತವಾಗಿ ನೋಡದೆ ಆತನ ಗುಣನಡತೆಯ ಮೂಲಕ ಗುರುತಿಸಿ ಎಂದು ಶರಣರು ಪ್ರತಿ ಪಾದಿಸಿದ್ದರು. ಇತರರ ಲೋಪವನ್ನು ಹೇಳುವ ಮೊದಲು ತನ್ನ ಆತ್ಮ ವಿಮರ್ಶೆ ಯನ್ನು ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮವನ್ನು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ವಿಜಯ ಬಲ್ಲಾಳ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಹಿರಿಯ ವಿಮರ್ಶಕ ಪ್ರೊ.ಮುರಳೀ ಧರ ಉಪಾಧ್ಯ ಹಿರಿಯಡಕ ವಹಿಸಿದ್ದರು. ಪರಿಷತ್‌ನ ತಾಲೂಕು ಅಧ್ಯಕ್ಷ ಯು. ಸಿ.ನಿರಂಜನ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯ ಮೇಟಿ ಮುದಿಯಪ್ಪ ಸ್ವಾಗತಿಸಿದರು. ರಥಬೀದಿ ಗೆಳೆಯರು ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ಕಾರ್ಯಕ್ರಮ ನಿರೂ ಪಿಸಿದರು. ಬಳಿಕ ವಿದ್ವಾನ್ ಮಹಾಬಲೇಶ್ವರ ಭಾಗವತ್ ಅವರಿಂದ ವಚನ ಸಂಗೀತ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News