ಧಾರ್ಮಿಕ ಕೇಂದ್ರಗಳ ಪುನರ್ನಿರ್ಮಾಣ ವೆಚ್ಚ ಪಾವತಿಸಲು ಗುಜರಾತ್ ಹೈಕೋರ್ಟ್ ನೀಡಿದ್ದ ಆದೇಶ ತಳ್ಳಿಹಾಕಿದ ಸುಪ್ರೀಂ
ಹೊಸದಿಲ್ಲಿ, ಆ.29: 2002ರಲ್ಲಿ ಸಂಭವಿಸಿದ್ದ ಗೋಧ್ರಾ ಘಟನೆಯ ತರುವಾಯದ ಗಲಭೆಯ ಸಂದರ್ಭ ಹಾನಿಗೀಡಾಗಿರುವ ಧಾರ್ಮಿಕ ಕೇಂದ್ರಗಳ ಪುನರ್ನಿರ್ಮಾಣ ಹಾಗೂ ದುರಸ್ತಿ ಕಾರ್ಯಗಳ ವೆಚ್ಚವನ್ನು ಪಾವತಿಸುವಂತೆ ಗುಜರಾತ್ ಸರಕಾರಕ್ಕೆ ಸೂಚಿಸಿದ್ದ ಗುಜರಾತ್ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.
ಹೈಕೋರ್ಟ್‌ನ ಆದೇಶದ ಬಗ್ಗೆ ಮೇಲ್ಮನವಿ ಸಲ್ಲಿಸಲು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರ ಹಾಗೂ ಪಿ.ಸಿ.ಪಂತ್ ಅವರನ್ನೊಳಗೊಂಡ ನ್ಯಾಯಾಲಯದ ಪೀಠವು ಗುಜರಾತ್ ಸರಕಾರಕ್ಕೆ ಅವಕಾಶ ಮಾಡಿಕೊಟ್ಟಿದೆ.
ಗಲಭೆಯ ಸಂದರ್ಭ ಹಾನಿಗೀಡಾದ ವಿವಿಧ ಕಟ್ಟಡ, ಅಂಗಡಿ ಹಾಗೂ ಮನೆಗಳ ಪುನರ್ನಿರ್ಮಾಣ ಹಾಗೂ ದುರಸ್ತಿ ಕಾರ್ಯದ ವೆಚ್ಚವನ್ನು ‘ಎಕ್ಸ್‌ಗ್ರೇಷಿಯ’ (ಪರಿಹಾರನಿಧಿ) ನಿಧಿಯಿಂದ ಪಾವತಿಸಲು ಸರಕಾರ ಸಿದ್ಧವಿದೆ ಎಂದು ರಾಜ್ಯ ಸರಕಾರವನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ತಿಳಿಸಿದರು. ಇದಕ್ಕೆ ಕೋರ್ಟ್ ಅನುಮತಿ ನೀಡಿದೆ ಎಂದು ಮೆಹ್ತ ತಿಳಿಸಿದ್ದಾರೆ.
ಗುಜರಾತ್‌ನಲ್ಲಿ 2002ರಲ್ಲಿ ಗೋಧ್ರಾ ಪ್ರಕರಣದ ಬಳಿಕ ಭುಗಿಲೆದ್ದಿದ್ದ ಹಿಂಸಾಚಾರದಲ್ಲಿ ಹಾನಿಗೀಡಾಗಿದ್ದ 500ಕ್ಕೂ ಹೆಚ್ಚು ಧಾರ್ಮಿಕ ಕೇಂದ್ರಗಳಿಗೆ ಪರಿಹಾರ ನೀಡಬೇಕೆಂದು ಹೈಕೋರ್ಟ್ ಗುಜರಾತ್ ಸರಕಾರಕ್ಕೆ ಆದೇಶ ನೀಡಿದ್ದು ಈ ಬಗ್ಗೆ ರಾಜ್ಯ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.