×
Ad

‘ಜಿಲ್ಲಾಡಳಿತದಿಂದ ಹೊಯ್ಗೆ ದೋಣಿ ಕಾರ್ಮಿಕರಿಗೆ ಕುತ್ತು’

Update: 2017-08-29 22:04 IST

ಉಡುಪಿ, ಆ.29: ತಲೆತಲಾಂತರದಿಂದ ಸಾಂಪ್ರದಾಯಿಕವಾಗಿ ಮಾನವಶ್ರಮದಿಂದ ಮರಳುಗಾರಿಕೆ ಮಾಡುತಿದ್ದ ಹೊಯ್ಗೆ ದೋಣಿ ಕಾರ್ಮಿಕರಿಗೆ ಜಿಲ್ಲಾಡಳಿತದ ಹೊಸ ಮರಳುಗಾರಿಕಾ ನೀತಿಯಿಂದ ಕುತ್ತು ಬಂದಿದೆ ಎಂದು ಉಡುಪಿ ಜಿಲ್ಲಾ ಹೊಯ್ಗೆ ದೋಣಿ ಕಾರ್ಮಿಕರ ಸಂಘ ಆರೋಪಿಸಿದೆ.

ಸಂಘ, ಸಾಂಪ್ರದಾಯಿಕವಾಗಿ ಮಾನವ ಶ್ರಮದಿಂದ ಸಾಮಾನ್ಯ ಮರಳನ್ನು ಕಾರ್ಮಿಕರ ಮೂಲಕ ತೆರವುಗೊಳಿಸಿ ಜಿಲ್ಲೆಯ ಜನತೆಗೆ ಮರಳನ್ನು ಸರಬರಾಜು ಮಾಡುತ್ತಾ ಬಂದಿದ್ದು, ಇದೀಗ ಜಿಲ್ಲಾಡಳಿತ ಉಚ್ಛ ನ್ಯಾಯಾಲಯಿದಂ ಕೆವಿಯೇಟ್‌ನ್ನು ಕಳುಹಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಜಿಲ್ಲೆಯ ಒಟ್ಟು 133 ಮಂದಿಗೆ ಪರವಾನಿಗೆಯನ್ನು ನೀಡುವುದಾಗಿ ಪ್ರಕಟಿಸಿದ್ದ ಭೂವಿಜ್ಞಾನ ಮತ್ತು ಗಣಿ ಇಲಾಖೆಯು ಇದೀಗ 45ಕ್ಕೂ ಅಧಿಕ ಜನರ ಬದುಕನ್ನು ಬರಡು ಮಾಡಲು ಹೊರಟಿದೆ. ತಮಗೆ ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯನ್ನೂ ಅದು ನೀಡುತ್ತಿಲ್ಲ ಎಂದು ಸಂಘ ದೂರಿದೆ.

ಹಲವು ಬಾರಿ ಗಣಿ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಲಿಖಿತ ಮನವಿಯ ಮೂಲಕ ದೂರುಗಳನ್ನು ನೀಡಿದರೂ ಸ್ಥಳೀಯ ಅಕ್ರಮ ಮರಳುಗಾರಿಕೆ ಹಾಗೂ ಹೊರಜಿಲ್ಲೆಯಿಂದ ಅಕ್ರಮವಾಗಿ ಬರುವ ಮರಳನ್ನು ತಡೆಯಲು ಗಣಿ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಈಗಲೂ ಪ್ರತಿದಿನ 200ರಿಂದ 300 ಲೋಡ್ ಮರಳು ಬರುತ್ತಿದೆ ಎಂದು ಸಂಘ ಹೇಳಿದೆ.

ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ತಮ್ಮ ಅಳಲು ತೋಡಿಕೊಂಡರೂ ಸರಿಪಡಿಸುವ ಭರವಸೆಯನ್ನು ಮಾತ್ರ ನೀಡುತಿದ್ದಾರೆ. ಸಂಘದ 170 ಮಂದಿಗೆ ಪರವಾನಿಗೆ ನೀಡಬೇಕೆಂಬುದು ನಮ್ಮ ಬೇಡಿಕೆ ಯಾಗಿದೆ.

 ಒಂದು ವೇಳೆ ಸಂಘದ ಬೇಡಿಕೆಯಂತೆ ಪರವಾನಿಗೆ ನೀಡದೇ ಇದ್ದಲ್ಲಿ ತೀವ್ರ ಹೋರಾಟಕ್ಕಿಳಿಯುವ ನಿರ್ಧಾರ ಮಾಡಿದ್ದೇವೆ ಎಂದು ಸಂಘದ ಅಧ್ಯಕ್ಷ ಲೋಕೇಶ್ ಮೆಂಡನ್, ಮಾಜಿ ಅಧ್ಯಕ್ಷ ಪಾಂಗಾಳ ಸುಧಾಕರ ಡಿ ಅಮೀನ್, ಕೋಶಾಧಿಕಾರಿ ಜೋಸೆಫ್ ಡಿಸೋಜ, ಪ್ರಧಾನ ಕಾರ್ಯದರ್ಶಿ ಯೋಗೀಶ್ ಶಾನ್‌ಭಾಗ್ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News