×
Ad

ಡೋಕಾಲಾದಲ್ಲಿ ರಸ್ತೆ ನಿರ್ಮಾಣ: ಭವಿಷ್ಯದ ಯೋಜನೆಗಳ ಬಗ್ಗೆ ಸಂದಿಗ್ಧತೆಯಲ್ಲಿ ಚೀನಾ

Update: 2017-08-29 22:20 IST

ಬೀಜಿಂಗ್,ಆ.29: ಭೂತಾನ್ ತನ್ನದೆಂದು ಹೇಳಿಕೊಂಡಿರುವ ಡೋಕಾ ಲಾ ಪ್ರದೇಶದಲ್ಲಿ ರಸ್ತೆ ನಿರ್ಮಾಣದ ತನ್ನ ಯೋಜನೆಯನ್ನು ಮುಂದುವರಿಸುವ ಬಗ್ಗೆ ಚೀನಾ ಸಂದಿಗ್ಧತೆಯಲ್ಲಿ ಸಿಲುಕಿದೆ. ಡೋಕಾ ಲಾದಲ್ಲಿ ರಸ್ತೆ ನಿರ್ಮಾಣದ ತನ್ನ ಯೋಜನೆಗಾಗಿ ‘ಎಲ್ಲ ಅಂಶಗಳನ್ನು’ ಚೀನಾ ಪರಿಶೀಲಿಸಲಿದೆ ಎಂದು ವಿದೇಶಾಂಗ ಸಚಿವಾಲಯವು ತಿಳಿಸಿದೆ.

ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ ಎರಡು ತಿಂಗಳ ಹಿಂದೆ ಸೃಷ್ಟಿಯಾಗಿದ್ದ ಬಿಕ್ಕಟ್ಟು ಸೋಮವಾರವಷ್ಟೇ ಬಗೆಹರಿದಿದ್ದು, ಡೋಕಾ ಲಾದಿಂದ ಬಂದಿರುವ ವರದಿಗಳು ಚೀನಾ ರಸ್ತೆ ನಿರ್ಮಾಣ ಕಾಮಗಾರಿಯನ್ನು ಮುಂದುವರಿಸ ದಿರಬಹುದು ಎಂಬ ಸುಳಿವು ನೀಡಿವೆ.
 ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಡೋಕಾ ಲಾದಲ್ಲಿ ರಸ್ತೆ ನಿರ್ಮಾಣ ಯೋಜನೆಯನ್ನು ಚೀನಾ ಸ್ಥಗಿತಗೊಳಿಸಿದೆಯೇ ಎಂದು ಸುದ್ದಿಗಾರರು ಒಂದಕ್ಕಿಂತ ಹೆಚ್ಚು ಬಾರಿ ಪ್ರಶ್ನಿಸಿದರೂ ವಿದೇಶಾಂಗ ಸಚಿವಾಲಯದ ವಕ್ತಾರೆ ಹುಆ ಚುನ್‌ಯಿಂಗ್ ಅವರು ನೇರವಾಗಿ ಉತ್ತರಿಸಲಿಲ್ಲ. ಬದಲಾಗಿ ಅವರ ಉತ್ತರವು ಅಸ್ಪಷ್ಟತೆಯಿಂದ ಕೂಡಿದ್ದು, ಚೀನಾ ರಸ್ತೆ ನಿರ್ಮಾಣ ಯೋಜನೆಯನ್ನು ಸ್ಥಗಿತಗೊಳಿಸಿರಬಹುದು ಎಂಬ ಸಂಕೇತವನ್ನು ನೀಡಿತ್ತು.
ಚೀನಾ ಸುದೀರ್ಘ ಕಾಲದಿಂದ ಡೋಕಾ ಲಾದಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದೆ. ವಾಸ್ತವ ಪರಿಸ್ಥಿತಿಗೆ ಅನುಗುಣ ವಾಗಿ ಸಂಬಂಧಿತ ನಿರ್ಮಾಣ ಯೋಜನೆಗಳನ್ನು ರೂಪಿಸಲು ಹವಾಮಾನ ಸೇರಿದಂತೆ ಎಲ್ಲ ಅಂಶಗಳನ್ನು ನಾವು ಪರಿಗಣಿಸಲಿದ್ದೇವೆ ಎಂದು ಹುಆ ಹೇಳಿದರು.
ಗಡಿಗಳ ರಕ್ಷಣೆಯ ಅಗತ್ಯಗಳನ್ನು ಪೂರೈಸಲು ಮತ್ತು ಜನರ ಜೀವನ ಸ್ಥಿತಿಯನ್ನು ಉತ್ತಮಗೊಳಿಸಲು ಚೀನಾ ಸುದೀರ್ಘ ಕಾಲದಿಂದಲೂ ರಸ್ತೆ ನಿರ್ಮಾಣ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುತ್ತಿದೆ ಎಂದರು.
ಡೋಕಾ ಲಾ ಪ್ರದೇಶದಲ್ಲಿ ಚೀನಿ ಗಡಿ ಸೈನಿಕರ ಉಪಸ್ಥಿತಿ ಮತ್ತು ಗಸ್ತು ಕಾರ್ಯ ಮುಂದುವರಿಯಲಿದೆ ಎಂದು ಹುಆ ಒತ್ತಿ ಹೇಳಿದರು.

ಡೋಕಾ ಲಾ ಬಿಕ್ಕಟ್ಟು ಬಗೆಹರಿದಿರುವುದನ್ನು ಚೀನಿ ತಜ್ಞರು ಸ್ವಾಗತಿಸಿದ್ದಾರಾದರೂ, ಭವಿಷ್ಯದಲ್ಲಿ ಇಂತಹ ಬಿಕ್ಕಟ್ಟುಗಳ ಬಗ್ಗೆ ಎಚ್ಚರಿಕೆ ಅಗತ್ಯ ಎಂದಿದ್ದಾರೆ. ಡೋಕಾ ಲಾದಲ್ಲಿ ಚೀನಿ ಪಡೆಗಳಿಂದ ರಸ್ತೆ ನಿರ್ಮಾಣವನ್ನು ಪ್ರತಿಭಟಿಸಿದ್ದ ಭೂತಾನದೊಂದಿಗೆ ಚೀನಾ ಸಮಾಲೋಚನೆಗಳನ್ನು ನಡೆಸುತ್ತಿದೆಯೇ ಎಂಬ ಪ್ರಶ್ನೆಗೆ ಹುಆ ಉತ್ತರಿಸಲಿಲ್ಲ. ಈವರೆಗೆ ಭಾರತೀಯ ಯೋಧರಿಂದ ಅತಿಕ್ರಮ ಪ್ರವೇಶದ ಬಿಕ್ಕಟ್ಟನ್ನು ನಾವು ಬಗೆಹರಿಸಿಕೊಂಡಿದ್ದೇವೆ ಎಂದು ಅವರು ಹೇಳಿದರು.
ಸೆ.3ರಿಂದ 5ರವರೆಗೆ ಷಿಯಾಮೆನ್ ನಗರದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯನ್ನು ಪ್ರಸ್ತಾಪಿಸಿದ ಅವರು, ಶೃಂಗಸಭೆಯ ಯಶಸ್ಸಿನಲ್ಲಿ ಗುಂಪಿನ ಎಲ್ಲ ಸದಸ್ಯ ರಾಷ್ಟ್ರಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಚೀನಾ ಆಶಿಸಿದೆ ಎಂದು ಹೇಳಿದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
    
    ಮಾಧ್ಯಮಗಳಲ್ಲಿ ಒರಟುತನ  ಪ್ರದರ್ಶಿಸಿದ್ದ ಚೀನಾ:ಲಾಂಬಾ


ಡೋಕಾ ಲಾ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಚೀನಾ ಮಾಧ್ಯಮಗಳಲ್ಲಿ ನೀಡಿದ್ದ ಹೇಳಿಕೆಗಳು ತೀವ್ರ ಒರಟುತನದಿಂದ ಕೂಡಿದ್ದವು, ಆದರೆ ಭಾರತವು ಸುಮ್ಮನಿತ್ತು ಮತ್ತು ಅದರ ಈ ನಡೆ ಫಲವನ್ನು ನೀಡಿದೆ ಎಂದು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ ಅವರು ಹೇಳಿದರು. ಮಂಗಳವಾರ ದಿಲ್ಲಿಯಲ್ಲಿ ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಡೋಕಾ ಲಾ ವಿವಾದ ಕುರಿತು ಚೀನಾದ ಮಾಧ್ಯಮ ಪ್ರಚಾರ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು. ಪ್ರಸಕ್ತ ಸ್ಥಿತಿಯ ಕುರಿತು ಪ್ರಶ್ನೆಗೆ ಅವರು, ವಿದೇಶಾಂಗ ಸಚಿವಾಲಯವು ಈಗಾಗಲೇ ಹೇಳಿಕೆಯನ್ನು ನೀಡಿದೆ ಮತ್ತು ತಾನು ಹೇಳಬೇಕಾದ್ದು ಏನೂ ಇಲ್ಲ ಎಂದಷ್ಟೇ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News