×
Ad

ತೆರಿಗೆ ಬಾಕಿ: ಹಚಿಸನ್‌ಗೆ 7,900 ಕೋ.ರೂ.ದಂಡ

Update: 2017-08-29 22:29 IST

ಹೊಸದಿಲ್ಲಿ, ಆ. 29: ದಶಕದ ಹಿಂದೆ ಭಾರತದಲ್ಲಿಯ ತನ್ನ ಮೊಬೈಲ್ ಫೋನ್ ಉದ್ಯಮವನ್ನು ವೊಡಾಫೋನ್ ಗ್ರೂಪ್‌ಗೆ ಮಾರಾಟಕ್ಕೆ ಸಂಬಂಧಿಸಿದಂತೆ ಬಿಲಿಯಾಧಿಪತಿ ಲಿ ಕಾ-ಶಿಂಗ್ ಅವರ ಸಿ ಕೆ ಹಚಿಸನ್ ಹೋಲ್ಡಿಂಗ್ ಲಿ.(ಸಿಕೆಎಚ್‌ಎಚ್‌ಎಲ್)ನ ಅಂಗಸಂಸ್ಥೆ ಹಚಿಸನ್ ಟೆಲಿಕಮ್ಯುನಿಕೇಷನ್ಸ್ ಇಂಟರ್‌ನ್ಯಾಷನಲ್ ಲಿ.(ಎಚ್‌ಟಿಐಎಲ್) 7,900 ಕೋ.ರೂ.ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದಕ್ಕಾಗಿ ಆದಾಯ ತೆರಿಗೆ ಇಲಾಖೆಯು ಅದಕ್ಕೆ ಅಷ್ಟೇ ಮೊತ್ತದ ದಂಡವನ್ನು ವಿಧಿಸಿದೆ.

ಕಳೆದ ವರ್ಷಾಂತ್ಯದಲ್ಲಿ ಎಚ್‌ಟಿಐಎಲ್ 7,900 ಕೋ.ರೂ.ತೆರಿಗೆ ಪಾವತಿಸುವಂತೆ ಭಾರತದ ಆದಾಯ ತೆರಿಗೆ ಇಲಾಖೆಯ ನೋಟಿಸ್ ಮತ್ತು ಈ ವರ್ಷದ ಆ.9ರಂದು ಅಷ್ಟೇ ಮೊತ್ತದ ದಂಡವನ್ನು ಹೇರಿದ ಆದೇಶವನ್ನು ಸ್ವೀಕರಿಸಿದೆ ಎಂದು ಸಿಕೆಎಚ್‌ಎಚ್‌ಎಲ್ ಹಾಂಗ್‌ಕಾಂಗ್ ಶೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿರುವ ದಾಖಲೆಯಲ್ಲಿ ತಿಳಿಸಿದೆ.

ಈ ತೆರಿಗೆಗಳ ಸಿಂಧುತ್ವ ಕುರಿತು ವಿವಾದವನ್ನು ಎಚ್‌ಟಿಐಎಲ್ ಮುಂದುವರಿಸಲಿದೆ ಎಂದು ಮಾತೃಸಂಸ್ಥೆಯು ತಿಳಿಸಿದೆ.

ಭಾರತದಲ್ಲಿ ಸ್ವಾಧೀನ ಪ್ರಕ್ರಿಯೆಯು ತೆರಿಗೆ ಮುಕ್ತವಾಗಿದೆ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯವು 2012,ಜನವರಿಯಲ್ಲಿ ನೀಡಿದ್ದ ತೀರ್ಪನ್ನು ಬುಡಮೇಲು ಗೊಳಿಸುವ ಉದ್ದೇಶದಿಂದ ಪೂರ್ವಾನ್ವಯಿತ ಶಾಸನದ ಆಧಾರದಲ್ಲಿ ತೆರಿಗೆ ತಗಾದೆ ನೋಟಿಸನ್ನು ಹೊರಡಿಸಲಾಗಿದ್ದು, ಈ ತೆರಿಗೆಗಳು ಸಿಂಧುವಾಗಿಲ್ಲ ಮತ್ತು ಅಂತರರಾಷ್ಟ್ರೀಯ ಕಾನೂನಿನ ತತ್ವಗಳನ್ನು ಉಲ್ಲಂಘಿಸಿದೆ ಎಂದು ಕಂಪನಿಯು ಹೇಳಿದೆ.

2007ರಲ್ಲಿ ಈಗ ಸಿಕೆ ಹಚಿಸನ್‌ನ ಭಾಗವಾಗಿರುವ ಹಚಿಸನ್ ವ್ಹಾಂಪೋವಾದ ಒಡೆತನದಲ್ಲಿದ್ದ ಮೊಬೈಲ್ ಫೋನ್ ಉದ್ಯಮದ ಶೇ.67ರಷ್ಟು ಪಾಲನ್ನು ವೊಡಾಫೋನ್ ಖರೀದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News